ಆರ್.ಎನ್. ರವಿ
–ಪಿಟಿಐ ಚಿತ್ರ
ಚೆನ್ನೈ: ರಾಜ್ಯ ಸರ್ಕಾರದ ನಾಲ್ಕು ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡುವ ವಿಚಾರವಾಗಿ ಡಿಎಂಕೆ ನೇತೃತ್ವದ ಸರ್ಕಾರ ಹಾಗೂ ರಾಜ್ಯಪಾಲ ಆರ್.ಎನ್. ರವಿ ಅವರ ನಡುವೆ ಹೊಸದಾಗಿ ಸಂಘರ್ಷ ಮೂಡಿದೆ.
ಕುಲಪತಿ ನೇಮಕಕ್ಕೆ ರಚಿಸುವ ಶೋಧ ಸಮಿತಿಯಲ್ಲಿ ವಿಶ್ವವಿದ್ಯಾಲಯಗಳ ಅನುದಾನ ಆಯೋಗದಿಂದ (ಯುಜಿಸಿ) ನಾಮನಿರ್ದೇಶಿತರಾಗುವ ಒಬ್ಬರು ಸೇರಿದಂತೆ ಒಟ್ಟು ನಾಲ್ಕು ಮಂದಿ ಸದಸ್ಯರಿರಬೇಕು ಎಂಬುದು ರಾಜ್ಯಪಾಲರ ನಿಲುವು. ಆದರೆ, ನಾಲ್ಕು ಸದಸ್ಯರ ಅಗತ್ಯ ಇಲ್ಲ, ಮೂವರು ಸದಸ್ಯರು ಸಾಕು ಎಂದು ಸರ್ಕಾರ ಪ್ರತಿಪಾದಿಸುತ್ತಿದೆ.
ಅಣ್ಣಾಮಲೈ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕಕ್ಕೆ ಯುಜಿಸಿಯಿಂದ ನಾಮನಿರ್ದೇಶಿರಾದ ಸದಸ್ಯ ಇಲ್ಲದೆ ರಚಿಸಿರುವ ಶೋಧ ಸಮಿತಿಯನ್ನು ರದ್ದುಪಡಿಸಬೇಕು ಎಂದು ರಾಜ್ಯಪಾಲರು ಈಚೆಗೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅಣ್ಣಾ ವಿಶ್ವವಿದ್ಯಾಲಯ, ಭಾರತಿದಾಸನ್ ವಿಶ್ವವಿದ್ಯಾಲಯ ಮತ್ತು ಪೆರಿಯಾರ್ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕಕ್ಕೆ ಶೋಧ ಸಮಿತಿಯನ್ನು ಅಧಿಸೂಚನೆಯಲ್ಲಿ ಪ್ರಕಟಿಸಬೇಕು ಎಂದು ರವಿ ಅವರು ಸರ್ಕಾರಕ್ಕೆ ಹೇಳಿದ್ದಾರೆ.
‘ಯುಜಿಸಿ ಅಧ್ಯಕ್ಷರು ನಾಮನಿರ್ದೇಶನ ಮಾಡುವ ವ್ಯಕ್ತಿಯನ್ನು ಈ ವಿಶ್ವವಿದ್ಯಾಲಯಗಳಿಗಾಗಿ ರಚಿಸುವ ಶೋಧ ಸಮಿತಿಯಲ್ಲಿ ಸೇರಿಸಬೇಕಿರುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕುಲಾಧಿಪತಿಯವರು ಸಂವಿಧಾನ ಮತ್ತು ಕಾನೂನಿನ ವ್ಯಾಪ್ತಿಯಲ್ಲಿ ಶೋಧ ಸಮಿತಿಯನ್ನು ರಚಿಸಿದ್ದಾರೆ. ಕುಲಪತಿಯ ನೇಮಕವು ನ್ಯಾಯಸಮ್ಮತವಾಗಿ, ನಿಷ್ಪಕ್ಷಪಾತಿಯಾಗಿ ಇರಬೇಕು ಎಂಬುದು ಇದರ ಉದ್ದೇಶ’ ಎಂದು ರಾಜಭವನ ಹೇಳಿದೆ.
ಯುಜಿಸಿ ಅಧ್ಯಕ್ಷರಿಂದ ನಾಮನಿರ್ದೇಶಿತರಾದ ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂದು ರಾಜ್ಯಪಾಲರ ಕಚೇರಿಯು ಆಕ್ಷೇಪ ವ್ಯಕ್ತಪಡಿಸಿದೆ. ಯುಜಿಸಿ ನಿಯಮಗಳಿಗೆ ವಿರುದ್ಧವಾಗಿ ರಚಿಸಿದ ಶೋಧ ಸಮಿತಿಯ ಶಿಫಾರಸು ಆಧರಿಸಿ ಮಾಡುವ ಕುಲಪತಿ ನೇಮಕವು ಅಸಿಂಧುವಾಗುತ್ತದೆ ಎಂದು ಕೂಡ ಹೇಳಿದೆ.
‘ಯುಜಿಸಿ ಮಾರ್ಗಸೂಚಿಗಳು ಶಿಫಾರಸು ರೂಪದಲ್ಲಿ ಮಾತ್ರ ಇವೆ. ಅವುಗಳನ್ನು ಪಾಲಿಸುವ ಅಗತ್ಯ ಇಲ್ಲ. ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಸರ್ಕಾರವೊಂದು ಯುಜಿಸಿ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಒತ್ತಡ ತರುವುದು, ರಾಜಕೀಯ ಅರ್ಥ ಹೊಂದಿರುವ ಕೆಟ್ಟ ಉದ್ದೇಶದ ಕ್ರಮ’ ಎಂದು ತಮಿಳುನಾಡಿನ ಉನ್ನತ ಶಿಕ್ಷಣ ಸ ಚಿವ ಗೋವಿ ಚೆಝಿಯಾನ್ ಹೇಳಿದ್ದಾರೆ.
ರಾಜ್ಯಪಾಲರು ಹಾಗೂ ಸರ್ಕಾರದ ನಡುವಿನ ಸಂಘರ್ಷದ ಕಾರಣದಿಂದಾಗಿ ತಮಿಳುನಾಡಿನ ಒಟ್ಟು ಆರು ವಿಶ್ವವಿದ್ಯಾಲಯಗಳು ಕೆಲವು ತಿಂಗಳುಗಳಿಂದ ಕುಲಪತಿ ಇಲ್ಲದೆಯೇ ಕಾರ್ಯ ನಿರ್ವಹಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.