ADVERTISEMENT

ಗುಜರಾತ್‌: 8 ವರ್ಷದ ಬಾಲಕನಿಗೆ ಎಚ್‌ಎಂಪಿವಿ ಸೋಂಕು ದೃಢ

ಪಿಟಿಐ
Published 10 ಜನವರಿ 2025, 11:43 IST
Last Updated 10 ಜನವರಿ 2025, 11:43 IST
   

ಹಿಮ್ಮತ್‌ನಗರ: ಗುಜರಾತ್‌ನ ಸಬರಕಾಂತ ಜಿಲ್ಲೆಯ ಎಂಟು ವರ್ಷದ ಬಾಲಕನಿಗೆ ಎಚ್‌ಎಂಪಿವಿ ಸೋಂಕು ತಗುಲಿರುವುದು ಪ್ರಯೋಗಾಲಯದ ಪರೀಕ್ಷೆಯಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಎಚ್‌ಎಂಪಿವಿ ಪ್ರಕರಣಗಳ ಸಂಖ್ಯೆ ಸದ್ಯ ಮೂರಕ್ಕೆ ಏರಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಪ್ರಂತಿಜ್ ತಾಲ್ಲೂಕಿನ ಕೃಷಿ ಕಾರ್ಮಿಕರ ಕುಟುಂಬಕ್ಕೆ ಸೇರಿದ ಬಾಲಕನಲ್ಲಿ ಎಚ್‌ಎಂಪಿವಿ ಸೋಂಕು ಇರುವುದು ಖಾಸಗಿ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಆದರೆ ಆರೋಗ್ಯ ಅಧಿಕಾರಿಗಳು, ಇದರ ದೃಢೀಕರಣಕ್ಕಾಗಿ ಬಾಲಕನ ರಕ್ತದ ಮಾದರಿಗಳನ್ನು ಸಂಗ್ರಹಿಸಿ, ಸರ್ಕಾರಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಅಲ್ಲಿ ನಡೆಸಿದ ಪರೀಕ್ಷೆಯಲ್ಲೂ ಸೋಂಕು ಇರುವುದು ಶುಕ್ರವಾರ ದೃಢಪಟ್ಟಿದೆ ಎಂದು ಅವರು ಹೇಳಿದರು.

ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಬಾಲಕನ ಸ್ಥಿತಿ ಸ್ಥಿರವಾಗಿದೆ ಎಂದು ಸಬರಕಾಂತ ಜಿಲ್ಲಾಧಿಕಾರಿ ರತಂಕನವರ್ ಗಢಾವಿಚರಣ್ ತಿಳಿಸಿದ್ದಾರೆ.

ADVERTISEMENT

ಬಾಲಕನಿಗೆ ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಜ.6 ರಂದು ಗುಜರಾತ್‌ನಲ್ಲಿ ಎಚ್‌ಎಂಪಿವಿ ಸೋಂಕಿನ ಮೊದಲ ಪ್ರಕರಣ ವರದಿಯಾಯಿತು. ರಾಜಸ್ಥಾನದ ಎರಡು ತಿಂಗಳ ಮಗು ಜ್ವರ, ಮೂಗು ಕಟ್ಟುವಿಕೆ, ಸೋರುವ ಮೂಗು ಮತ್ತು ಕೆಮ್ಮಿನಂತಹ ರೋಗಲಕ್ಷಣಗಳಿರುವ ವೈರಲ್ ಕಾಯಿಲೆಯಿಂದ ಬಳಲುತ್ತಿರುವುದು ಕಂಡುಬಂದಿತ್ತು. ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಮಗು ಮನೆಗೆ ಮರಳಿದೆ.  

‌ಗುರುವಾರ, ಅಹಮದಾಬಾದ್ ನಗರದಲ್ಲಿ 80 ವರ್ಷದ ವ್ಯಕ್ತಿಯೊಬ್ಬರು ಪರೀಕ್ಷೆ ಮಾಡಿಸಿಕೊಂಡಾಗ ಎಚ್‌ಎಂಪಿವಿ ಸೋಂಕು ಇರುವುದು ದೃಢಪಟ್ಟಿದೆ. ಅಸ್ತಮಾದಿಂದ ಬಳಲುತ್ತಿದ್ದ ರೋಗಿಯು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.