ADVERTISEMENT

ರಫೇಲ್‌ ತೀರ್ಪು ತಿದ್ದುಪಡಿಗಾಗಿ ‘ಸುಪ್ರೀಂ’ಗೆ ಕೇಂದ್ರ ಮನವಿ

ಪಿಟಿಐ
Published 15 ಡಿಸೆಂಬರ್ 2018, 19:04 IST
Last Updated 15 ಡಿಸೆಂಬರ್ 2018, 19:04 IST
   

ನವದೆಹಲಿ:ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತು ನೀಡಿದ ತೀರ್ಪಿನಲ್ಲಿರುವ ಕೆಲವು ಪದಗಳನ್ನು ತಿದ್ದುಪಡಿ ಮಾಡುವಂತೆ ಕೋರಿ ಕೇಂದ್ರ ಸರ್ಕಾರ ಶನಿವಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದದಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ವಾಕ್ಸಮರ ಆರಂಭವಾಗಿದೆ.

ತೀರ್ಪಿನಲ್ಲಿ ಮಹಾಲೇಖಪಾಲರ (ಸಿಎಜಿ) ವರದಿ ಮತ್ತು ಸಂಸತ್‌ನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಕುರಿತು ಉಲ್ಲೇಖಿಸಿದ ಸಾಲುಗಳು ಸಾರ್ವಜನಿಕರ ತಪ್ಪು ಗ್ರಹಿಕೆಗೆ ದಾರಿ ಮಾಡಿಕೊಟ್ಟಿವೆ ಎಂದು ಕೇಂದ್ರ, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದೆ.

ADVERTISEMENT

ತಪ್ಪು ಗ್ರಹಿಕೆ

ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ತಾನು ಸಲ್ಲಿಸಿದ ವಿವರಣೆಯ ಟಿಪ್ಪಣಿಯಲ್ಲಿಯ ಕೆಲವು ಸಾಲುಗಳನ್ನು ತಪ್ಪಾಗಿ ಗ್ರಹಿಸಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ ಎಂದು ಕೇಂದ್ರ ಹೇಳಿದೆ.

ರಫೇಲ್‌ ಒಪ್ಪಂದದ ಬಗ್ಗೆ ಸಂಸತ್‌ನಲ್ಲಿ ಮಹಾಲೇಖಪಾಲರ (ಸಿಎಜಿ) ವರದಿ ಮಂಡಿಸಲಾಗಿದೆ ಎಂದು ಹೇಳಲಾಗಿದೆ. ಈ ವರದಿ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಪಿಎಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ತೀರ್ಪಿನಲ್ಲಿರುವ ತಪ್ಪುಗಳ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದೆ.

ತೀರ್ಪಿನಲ್ಲಿ ಪ್ರಸ್ತಾಪಿಸಿರುವ 25ನೇ ಪ್ಯಾರದಲ್ಲಿನ ಎರಡು ವಾಕ್ಯಗಳನ್ನು ಬದಲಿಸಬೇಕು. ರಫೇಲ್‌ಗೆ ಸಂಬಂಧಿಸಿದ ಸಿಎಜಿ ವರದಿಯನ್ನು ಪಿಎಸಿ ಪರಿಶೀಲಿಸಿದೆ ಮತ್ತು ವರದಿಯ ಆಯ್ದ ಭಾಗವನ್ನು ಈಗಾಗಲೇ ಸಂಸತ್‌ನ ಮುಂದೆ ಮಂಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದೆ.

ಎರಡು ಪದಗಳು ಹುಟ್ಟಿಸಿದ ಗೊಂದಲ

ತೀರ್ಪಿನಲ್ಲಿ ಸಿಎಜಿ ವರದಿಯನ್ನು ಪಿಎಸಿ ‘ಪರಿಶೀಲಿಸಿದೆ’ ಎನ್ನುವ ಬದಲು ‘ಪರಿಶೀಲಿಸಲಿದೆ’ ಎಂದು ಹೇಳಬೇಕಾಗಿತ್ತು. ಸಿಎಜಿ ವರದಿಯ ಆಯ್ದ ಭಾಗವನ್ನು ಸಂಸತ್‌ನ ಮುಂದೆ ಸರ್ಕಾರ ‘ಮಂಡಿಸಿದೆ’ ಎನ್ನುವಲ್ಲಿ ‘ಮಂಡಿಸಲಿದೆ’ ಎಂದಾಗಬೇಕಿತ್ತು ಎಂದು ಸರ್ಕಾರ ನ್ಯಾಯಾಲಯದ ಗಮನಕ್ಕೆ ತಂದಿದೆ.

ತೀರ್ಪಿನ 25ನೇ ಪ್ಯಾರಾದಲ್ಲಿ ಅಪಾರ್ಥ ನೀಡುವಂತಿರುವ ಈ ಎರಡು ಪದಗಳನ್ನು ಸರಿಪಡಿಸಿ, ಸಾರ್ವಜನಿಕ ವಲಯದಲ್ಲಿ ಉಂಟಾಗಿರುವ ಅನುಮಾನ ಮತ್ತು ಗೊಂದಲಗಳನ್ನು ಬಗೆಹರಿಸಬೇಕು ಎಂದು ನ್ಯಾಯಾಲಯವನ್ನು ಕೋರಿರುವುದಾಗಿ ಕೇಂದ್ರ ಸರ್ಕಾರದ ಉಪ ಕಾರ್ಯದರ್ಶಿ ಸುಶೀಲ್‌ ಕುಮಾರ್ ತಿಳಿಸಿದ್ದಾರೆ.

ತೀರ್ಪು ಸ್ವಾಗತಿಸಿದ ಡಾಸೊ

ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ಫ್ರಾನ್ಸ್‌ನ ಯುದ್ಧ ವಿಮಾನ ತಯಾರಿಕಾ ಕಂಪನಿ ಡಾಸೊ ಸ್ವಾಗತಿಸಿದೆ. ಒಪ್ಪಂದದಲ್ಲಿ ಯಾವುದೇ ರೀತಿಯ ಅಕ್ರಮ, ಅವ್ಯವಹಾರ ನಡೆದಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಕ್ಕೆ ಕಂಪನಿ ಹರ್ಷ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.