ನವದೆಹಲಿ: ಕುಲಾಂತರಿ ತಳಿಗಳನ್ನು ಅನುಮೋದಿಸುವ ಹಾಗೂ ನಿಯಂತ್ರಿಸುವ ಹೊಣೆ ಹೊತ್ತ ‘ಕುಲಾಂತರಿತಳಿ ಎಂಜಿನಿಯರಿಂಗ್ ಪರಿಶೀಲನಾ ಸಮಿತಿ’ಯ (ಜಿಇಎಸಿ) ಕಾರ್ಯವೈಖರಿಯಲ್ಲಿ ಮತ್ತಷ್ಟು ಪಾರದರ್ಶಕತೆ ತರುವುದಕ್ಕಾಗಿ, ನಿಯಮಗಳಿಗೆ ತಿದ್ದುಪಡಿಗಳನ್ನು ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
ಈ ಕುರಿತು ಕೇಂದ್ರ ಸರ್ಕಾರ ಡಿ.31ರಂದು ಅಧಿಸೂಚನೆ ಪ್ರಕಟಿಸಿದೆ.
ಜಿಇಎಸಿ ಸದಸ್ಯರ ವೈಯಕ್ತಿಕ ಅಥವಾ ವೃತ್ತಿಪರತೆಯ ಹಿತಾಸಕ್ತಿಗಳು ಅವರು ಕೈಗೊಳ್ಳುವ ನಿರ್ಧಾರದ ಮೇಲೆ ಪರಿಣಾಮ ಬೀರುವಂತಿದ್ದಲ್ಲಿ, ಅವುಗಳನ್ನು ಸದಸ್ಯರು ಬಹಿರಂಗಪಡಿಸಬೇಕು ಎಂಬುದು ಸೇರಿದಂತೆ ಹಲವು ಅಂಶಗಳನ್ನು ಪ್ರಸ್ತಾವಿತ ತಿದ್ದುಪಡಿ ಒಳಗೊಂಡಿದೆ.
ಪ್ರಸ್ತಾವಿತ ತಿದ್ದುಪಡಿಗಳ ಕುರಿತು ಸಾರ್ವಜನಿಕರು 60 ದಿನಗಳ ಒಳಗಾಗಿ ತಮ್ಮ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸಬಹುದು.
* ಸಮಿತಿಯ ಪರಿಗಣನೆಯಲ್ಲಿರುವ ಯಾವುದೇ ವಿಚಾರವು ನೇರವಾಗಿ ಇಲ್ಲವೇ ಪರೋಕ್ಷವಾಗಿ ಸದಸ್ಯರೊಂದಿಗೆ ನಂಟು ಹೊಂದಿದ್ದಲ್ಲಿ, ಆ ವಿಚಾರ ಕುರಿತ ಚರ್ಚೆಗಳಿಂದ ಸದಸ್ಯರು ದೂರ ಉಳಿಯಬೇಕು
* ಸಮಿತಿಗೆ ನೇಮಕಗೊಂಡ ಸಂದರ್ಭದಲ್ಲಿ, ತಜ್ಞರು ‘ಹಿತಾಸಕ್ತಿ ಸಂಘರ್ಷ’ ಕುರಿತಂತೆ ಲಿಖಿತವಾಗಿ ಘೋಷಣೆಗಳನ್ನು ಸಲ್ಲಿಸಬೇಕು
* ಹೊಸದಾಗಿ ಯಾವುದೇ ವಿಚಾರ ಪ್ರಸ್ತಾಪಗೊಂಡ ಸಂದರ್ಭದಲ್ಲಿ/ಸನ್ನಿವೇಶ ಸೃಷ್ಟಿಯಾದ ವೇಳೆ, ಈ ಘೋಷಣೆಗಳನ್ನು ಸದಸ್ಯರು ಅಪ್‌ಡೇಟ್ ಮಾಡಬೇಕು
* ಯಾವುದೇ ಸದಸ್ಯರಿಗೆ ಸಂಬಂಧಿಸಿ ‘ಹಿತಾಸಕ್ತಿ ಸಂಘರ್ಷ’ವಿರುವ ಬಗ್ಗೆ ಖಚಿತತೆ ಕಂಡುಬರದಿದ್ದ ಸಂದರ್ಭದಲ್ಲಿ, ಸಮಿತಿಯ ಮುಖ್ಯಸ್ಥರು ಅಂತಿಮ ತೀರ್ಮಾನ ತೆಗೆದುಕೊಳ್ಳುವರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.