ADVERTISEMENT

‘ಕೋಚಿಂಗ್‌ ಸಂಸ್ಥೆಗಳನ್ನು ಸರ್ಕಾರ ನಿಯಂತ್ರಿಸಲಿ’

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2025, 14:20 IST
Last Updated 15 ಫೆಬ್ರುವರಿ 2025, 14:20 IST
ಕನ್ಹಯ್ಯಕುಮಾರ್‌–ಪಿಟಿಐ ಚಿತ್ರ
ಕನ್ಹಯ್ಯಕುಮಾರ್‌–ಪಿಟಿಐ ಚಿತ್ರ   

ನವದೆಹಲಿ: ‘ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಕಾರಣಕ್ಕೆ ದೇಶದಾದ್ಯಂತ ಇರುವ ಕೋಚಿಂಗ್‌ ಕೇಂದ್ರಗಳನ್ನು ಸರ್ಕಾರ ನಿಯಂತ್ರಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡ ಕನ್ಹಯ್ಯಕುಮಾರ್‌ ಒತ್ತಾಯಿಸಿದರು.

ಪಕ್ಷದ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,‘ಯುಪಿಎಸ್ಸಿ, ಮೆಡಿಕಲ್‌, ಎಂಜಿನಿಯರಿಂಗ್‌ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ದೇಶದಾದ್ಯಂತ ಹಲವು ಖಾಸಗಿ ಕೋಚಿಂಗ್‌ ಕೇಂದ್ರಗಳು ತರಬೇತಿ ನೀಡುತ್ತಿವೆ. ಸರ್ಕಾರದ ಸಂಸ್ಥೆಗಳಲ್ಲಿ ಈ ವ್ಯವಸ್ಥೆ ಚೆನ್ನಾಗಿಲ್ಲ. ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿ, ನಂತರ ಈ ಕೇಂದ್ರಗಳು ಕಣ್ಮರೆಯಾಗುತ್ತಿವೆ. ದೇಶದಲ್ಲಿ ವ್ಯವಸ್ಥಿತ ವೈಫಲ್ಯ ಉಂಟಾಗಿದ್ದು, ಸರ್ಕಾರ ಇದರ ನೇರ ಹೊಣೆ ಹೊರಬೇಕು’ ಎಂದರು.

‘ಸರ್ಕಾರ ಹಾಗೂ ಮಾರುಕಟ್ಟೆಯ ನಡುವೆ ಸಿಲುಕಿ ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಜನರು ತತ್ತರಿಸುತ್ತಿದ್ದಾರೆ. ತಪ್ಪು ಎಸಗುವ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಬೇಕು. ದೇಶದಲ್ಲಿರುವ ಸರ್ಕಾರಿ ಸಂಸ್ಥೆಗಳನ್ನು ಬಲಪಡಿಸಬೇಕು’ ಎಂದು ಹೇಳಿದರು. 

ADVERTISEMENT

ದಿನಕ್ಕೆ 28 ಸಾವು: ‘ದೇಶದಲ್ಲಿ ದಿನವೊಂದಕ್ಕೆ ಸರಾಸರಿ 28 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಂಡರೆ, ‘ವ್ಯವಸ್ಥೆಯ ವೈಫಲ್ಯ’ ಎಂದೇ ಪರಿಗಣಿಸಲಾಗುತ್ತದೆ. ಅದೇ, ವ್ಯವಸ್ಥೆಯು ವಿದ್ಯಾರ್ಥಿಗಳನ್ನು ‘ಪ್ರೆಶರ್‌ ಕುಕ್ಕರ್‌’ಗಳನ್ನಾಗಿ ಪರಿವರ್ತಿಸಿದೆ. ಸಂಸ್ಥೆಗಳು ಕನಸುಗಳನ್ನು ಮಾರಾಟ ಮಾಡುತ್ತಿವೆ. ಆದರೆ, ಎಷ್ಟು ಸೀಟುಗಳು ಲಭ್ಯವಿದೆ? ಎಷ್ಟು ಮಂದಿಗೆ ಉದ್ಯೋಗ ಸಿಕ್ಕಿದೆ? ಇಂತಹ ಪ್ರಶ್ನೆಗಳು ಚರ್ಚೆಯಾಗುತ್ತಿಲ್ಲ’ ಎಂದು ಕನ್ಹಯ್ಯಕುಮಾರ್‌ ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.