ADVERTISEMENT

ಮಣಿಪುರದ ನೊಂನ್ಗ್‌ಪೊಕ್‌ ಸೆಕ್‌ಮೈ ಠಾಣೆಗೆ ಮೊದಲ ರ್‍ಯಾಂಕ್‌

ದೇಶದ 10 ಅತ್ಯುತ್ತಮ ಪೊಲೀಸ್‌ ಠಾಣೆಗಳನ್ನು ಘೋಷಿಸಿದ ಗೃಹ ಸಚಿವಾಲಯ

ಪಿಟಿಐ
Published 3 ಡಿಸೆಂಬರ್ 2020, 11:23 IST
Last Updated 3 ಡಿಸೆಂಬರ್ 2020, 11:23 IST
ಅಮಿತ್‌ ಶಾ
ಅಮಿತ್‌ ಶಾ   

ನವದೆಹಲಿ: ಮಣಿಪುರ ಜಿಲ್ಲೆಯ ಥೌಬಲ್‌ ಜಿಲ್ಲೆಯಲ್ಲಿರುವ ನೊಂನ್ಗ್‌ಪೊಕ್‌ ಸೆಕ್‌ಮೈ ಪೊಲೀಸ್‌ ಠಾಣೆಯು ದೇಶದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಪೊಲೀಸ್‌ ಠಾಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಗುರುವಾರ ಆನ್‌ಲೈನ್‌ ಮುಖಾಂತರ ನಡೆದ 55ನೇ ಪೊಲೀಸ್‌ ಮಹಾನಿರ್ದೇಶಕರು(ಡಿಜಿಪಿ) ಹಾಗೂ ಐಜಿಪಿಗಳ ವಾರ್ಷಿಕ ಸಭೆಯಲ್ಲಿ ದೇಶದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ 10 ಪೊಲೀಸ್‌ ಠಾಣೆಗಳನ್ನು ಘೋಷಿಸಲಾಯಿತು.

ಈ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾಗವಹಿಸಿದ್ದರು. ಈ ಪಟ್ಟಿಯಲ್ಲಿ ನಾಂನ್ಗ್‌ಪೊಕ್‌ ಸೆಕ್‌ಮೈ ಠಾಣೆಯು ಮೊದಲ ಸ್ಥಾನದಲ್ಲಿದೆ.

ADVERTISEMENT

‘ಪ್ರತಿ ವರ್ಷ ಭಾರತ ಸರ್ಕಾರವು ದೇಶದಲ್ಲೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಪೊಲೀಸ್ ಠಾಣೆಗಳನ್ನು ಗುರುತಿಸುತ್ತಿದೆ. ಈ ಮೂಲಕ ಪೊಲೀಸ್‌ ಠಾಣೆಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ತಂದು, ಅವುಗಳ ಕಾರ್ಯನಿರ್ವಹಣೆಯನ್ನು ಹೆಚ್ಚಿಸುವ ಉದ್ದೇಶ ಇದರ ಹಿಂದಿದೆ. 2015ರಲ್ಲಿ ಗುಜರಾತ್‌ನಲ್ಲಿ ನಡೆದ ಪೊಲೀಸ್‌ ಮಹಾನಿರ್ದೇಶಕರ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದ ಮೇಲೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಪೊಲೀಸ್‌ ಠಾಣೆಗಳನ್ನು ಗುರುತಿಸಲಾಗುತ್ತಿದೆ’ ಎಂದು ಗೃಹ ಸಚಿವಾಲಯ ತಿಳಿಸಿದೆ.

ಈ ಬಾರಿ ದೇಶದ 16,671 ಪೊಲೀಸ್‌ ಠಾಣೆಗಳ ಕಾರ್ಯವೈಖರಿಯನ್ನು ಸಮೀಕ್ಷೆ ನಡೆಸಲಾಗಿದೆ. ಕೋವಿಡ್‌–19 ಕಾರಣದಿಂದಾಗಿ ಸಮೀಕ್ಷೆ ಸವಾಲಿನಿಂದ ಕೂಡಿತ್ತು. ಹಲವು ನಿರ್ಬಂಧಗಳು ಇದ್ದ ಕಾರಣ ದೇಶದ ಮೂಲೆ ಮೂಲೆಗಳಲ್ಲಿ ಇರುವ ಠಾಣೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುವುದು ಸವಾಲಿನದ್ದಾಗಿತ್ತು’ ಎಂದು ಸಚಿವಾಲಯ ತಿಳಿಸಿದೆ.

ಆರಂಭಿಕ ಹಂತದಲ್ಲಿ ಪ್ರತಿ ರಾಜ್ಯದಿಂದ ಮೂರು, ದೆಹಲಿಯಿಂದ ಎರಡು ಹಾಗೂ ಕೇಂದ್ರಾಡಳಿತ ಪ್ರದೇಶದಿಂದ ತಲಾ ಒಂದು ಪೊಲೀಸ್‌ ಠಾಣೆಗಳನ್ನು ಆಯ್ಕೆ ಮಾಡಲಾಗಿತ್ತು. ಮುಂದಿನ ಹಂತಕ್ಕೆ 75 ಪೊಲೀಸ್‌ ಠಾಣೆಗಳನ್ನು ಆಯ್ಕೆ ಮಾಡಿ, ಅಂತಿಮ ಹಂತದಲ್ಲಿ ಜನರ ಅಭಿಪ್ರಾಯ, ಸಿಬ್ಬಂದಿಯ ಲಭ್ಯತೆ, ಠಾಣೆಯಲ್ಲಿರುವ ಮೂಲಸೌಕರ್ಯ, ಸೇವೆ ಹಾಗೂ ಅಪರಾಧ ತಡೆಗೆ ತೆಗೆದುಕೊಂಡ ಕ್ರಮ ಮುಂತಾದ 19 ವಿಷಯಗಳ ಆಧಾರದಲ್ಲಿ 10 ಠಾಣೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಚಿವಾಲಯವು ತಿಳಿಸಿದೆ.

ಪೊಲೀಸ್‌ ಠಾಣೆಗಳ ರ್‍ಯಾಂಕ್‌

ಸ್ಥಾನ*ಠಾಣೆ ಹೆಸರು* ರಾಜ್ಯ

1*ನಾಂನ್ಗ್‌ಪೊಕ್‌ ಸೆಕ್‌ಮೈ*ಮಣಿಪುರ

2*ಎಡಬ್ಲ್ಯುಪಿಎಸ್‌–ಸುರಮಂಗಲಂ*ತಮಿಳುನಾಡು(ಸೇಲಂ ನಗರ)

3*ಖರ್ಸಂಗ್‌*ಅರುಣಾಚಲ ಪ್ರದೇಶ(ಚಂಗ್‌ಲಾಂಗ್‌ ಜಿಲ್ಲೆ)

4*ಜಿಲ್‌ಮಿಲಿ(ಬೈಯಾ ಠಾಣೆ)*ಚತ್ತೀಸ್‌ಗಡ

5*ಸಂಗ್ವೆಮ್‌*ಗೋವಾ

6*ಕಾಲಿಘಾಟ್‌*ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ

7*ಪಕ್‌ಯೋಂಗ್‌*ಸಿಕ್ಕಿಂ

8*ಕಾಂತ್‌(ಮೊರಾದಾಬಾದ್‌)*ಉತ್ತರ ಪ್ರದೇಶ

9*ಖಾನ್‌ವೆಲ್‌* ದಾದ್ರಾ ಮತ್ತು ನಗರ್‌ ಹಾವೇಲಿ

10*ಜಮ್ಮಿಕುಂಟಾ ನಗರ ಠಾಣೆ*ತೆಲಂಗಾಣ(ಕರೀಂನಗರ ಜಿಲ್ಲೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.