ADVERTISEMENT

ಪ್ರಗತಿಗೆ ವೇಗ ತುಂಬಿದ 50 ದಿನ : ಸಚಿವ ಜಾವಡೇಕರ್‌

ಎನ್‌ಡಿಎ ಸರ್ಕಾರದ ಸಾಧನೆ ಬಿಚ್ಚಿಟ್ಟ ಸಚಿವ ಜಾವಡೇಕರ್‌

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:35 IST
Last Updated 22 ಜುಲೈ 2019, 19:35 IST
ಪ್ರಕಾಶ್‌ ಜಾವಡೇಕರ್‌
ಪ್ರಕಾಶ್‌ ಜಾವಡೇಕರ್‌   

ನವದೆಹಲಿ (ಪಿಟಿಐ): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸೋಮವಾರ 50 ದಿನಗಳನ್ನು ಪೂರ್ಣ
ಗೊಳಿಸಿದೆ.

ಈ ಸಂದರ್ಭದಲ್ಲಿ ತನ್ನ ಸಾಧನೆಯ ಪಟ್ಟಿಯನ್ನು ಜನರ ಮುಂದಿಟ್ಟಿರುವ ಸರ್ಕಾರ, ‘ಅಭಿವೃದ್ಧಿಯ ವಿಚಾರದಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಈಗ ಅಭಿವೃದ್ಧಿಯ ವೇಗ ಹೆಚ್ಚಿದೆ’ ಎಂದಿದೆ.

ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಸರ್ಕಾರದ ಸಾಧನೆಗಳ ಪಟ್ಟಿ ಸೋಮವಾರ ಬಿಚ್ಚಿಟ್ಟರು. ‘ಸರ್ಕಾರದ ಎರಡನೆಯ ಅವಧಿಯ ಮೊದಲ 50 ದಿನಗಳಲ್ಲಿ ನಮ್ಮ ಅಭಿವೃದ್ಧಿಯ ವೇಗ, ಕೌಶಲ ಹಾಗೂ ಪ್ರಮಾಣ ಏನೆಂಬುದು ವ್ಯಕ್ತವಾಗಿದೆ’ ಎಂದರು.

ADVERTISEMENT

‘ಮೂಲಸೌಲಭ್ಯ, ಸಾಮಾಜಿಕ ನ್ಯಾಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಚಾರಿತ್ರಿಕ ಹೆಜ್ಜೆಗಳನ್ನಿಟ್ಟಿದೆ. ರಸ್ತೆ ನಿರ್ಮಾಣ, ರೈಲ್ವೆ ಕಾಮಗಾರಿಗಳು, ಬಂದರು, ವಿಮಾನ ನಿಲ್ದಾಣ ನಿರ್ಮಾಣದಂಥ ಯೋಜನೆಗಳಿಗಾಗಿ ₹ 100 ಲಕ್ಷ ಕೋಟಿ ಹೂಡಿಕೆ ಮಾಡುವುದು, 2024ರ ವೇಳೆಗೆ ಪ್ರತಿ ಮನೆಗೆ ನೀರಿನ ಸಂಪರ್ಕ ಒದಗಿಸುವ ಗುರಿ ಇಟ್ಟುಕೊಂಡು ‘ಜಲಶಕ್ತಿ’ ಸಚಿವಾಲಯ ರಚನೆ ಮುಂತಾದ ಯೋಜನೆಗಳ ಅನುಷ್ಠಾನದ ಮೂಲಕ ನಾವು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹೆಜ್ಜೆಗಳನ್ನಿಟ್ಟಿದ್ದೇವೆ. ಜಾಗತಿಕ ವೇದಿಕೆಗಳಲ್ಲಿ ಪ್ರಧಾನಿ ಮೋದಿ ಅವರ ಉಪಸ್ಥಿತಿಯು ವಿಶ್ವ ಮಟ್ಟದ ರಾಜಕೀಯದಲ್ಲಿ ಭಾರತದ ಪ್ರಭಾವ ಹೆಚ್ಚುವಂತೆ ಮಾಡಿದೆ’ ಎಂದರು.

‘ಮುಂದಿನ ಐದು ವರ್ಷಗಳಲ್ಲಿ ಹೂಡಿಕೆಗೆ ಇನ್ನಷ್ಟು ಅವಕಾಶಗಳನ್ನು ನಿರ್ಮಿಸಲಾಗುವುದು. ಜಗತ್ತಿನ ಎಲ್ಲಾ ಭಾಗಗಳಿಂದ ಭಾರತಕ್ಕೆ ಬಂಡವಾಳ ಹರಿದು ಬರಲಿದೆ. ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌ ಮತ್ತು ಸಬ್‌ಕಾ ವಿಶ್ವಾಸ್‌ ಎಂಬ ಮೋದಿ ಅವರ ಮಂತ್ರ ಸಾಕಾರವಾಗುವ ವಿಶ್ವಾಸ ಪ್ರತಿಯೊಬ್ಬರಲ್ಲೂ ಮೂಡುವ ರೀತಿಯಲ್ಲಿ 50 ದಿನಗಳಲ್ಲಿ ಕೆಲಸ ಮಾಡಲಾಗಿದೆ. 50 ದಿನಗಳ ಆಡಳಿತದಲ್ಲಿ ‘ಸಾಮಾಜಿಕ ನ್ಯಾಯ’ವೇ ಪ್ರಧಾನವಾಗಿ ಗೋಚರಿಸಿದೆ ಎಂದು ಜಾವಡೇಕರ್‌ ಪ್ರತಿಪಾದಿಸಿದರು.

ಪ್ರಮುಖ ನಿರ್ಧಾರಗಳು

lಪ್ರತಿ ರೈತನಿಗೆ ₹ 6000 ಆರ್ಥಿಕ ನೆರವು

l10 ಸಾವಿರ ರೈತ ಸಂಘಟನೆಗಳ ಆರಂಭ

lಕಾರ್ಮಿಕ ಸಂಹಿತೆ ರಚನೆಯ ಮೂಲಕ ಅಸಂಘಟಿತ ಕ್ಷೇತ್ರದ 40 ಕೋಟಿ ಕಾರ್ಮಿಕರಿಗೆ ಭದ್ರತೆ ನೀಡಲು ಕ್ರಮ

lಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ₹ 70 ಸಾವಿರ ಕೋಟಿ ಪುನರ್ಧನ ನೀಡುವ ಮೂಲಕ ಹೂಡಿಕೆ ಹೆಚ್ಚಿಸಲು ಕ್ರಮ

lನವೋದ್ಯಮ ಸ್ಥಾಪಿಸಲು ಮುಂದಾಗುವವರಿಗೆ ನೆರವಾಗಲು ಪ್ರತ್ಯೇಕ ಟಿ.ವಿ. ವಾಹಿನಿ ಆರಂಭ

lಹುತಾತ್ಮರಾದ ಸೈನಿಕರು ಮತ್ತು ಪೊಲೀಸರ ಮಕ್ಕಳ ಶಿಕ್ಷಣ ಮುಂದುವರಿಕೆಗೆ ವಿದ್ಯಾರ್ಥಿವೇತನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.