ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ಅರ್ಹ ಎಲ್ಲ ರೈತರಿಗೆ ಸೌಲಭ್ಯ ನೀಡಲು ಕೇಂದ್ರ ಸರ್ಕಾರ ಸಿದ್ದವಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಹೇಳಿದರು.
ಲೋಕಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಭೂ ರಹಿತರಿಗೆ ಈ ಸೌಲಭ್ಯ ನೀಡುವುದಿಲ್ಲ. ಆದರೆ, ತುಂಡು ಕೃಷಿ ಭೂಮಿಯನ್ನಾದರೂ ಹೊಂದಿರಬೇಕು ಎಂದು ವಿವರಿಸಿದರು.
‘ಈ ಯೋಜನೆಯಡಿ ಕೇಂದ್ರ ಸರ್ಕಾರವು ಈವರೆಗೆ 19 ಕಂತುಗಳಲ್ಲಿ ₹3.68 ಲಕ್ಷ ಕೋಟಿ ಮೊತ್ತವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದೆ’ ಎಂದರು.
ಯೋಜನೆಯ ಭಾಗವಾಗಿಲ್ಲದ ಎಲ್ಲ ಅರ್ಹ ರೈತರಿಗೆ ವಾರ್ಷಿಕ ₹6,000 ನಗದು ಪ್ರಯೋಜನ ನೀಡಲು ಸರ್ಕಾರ ಸಿದ್ಧವಾಗಿದೆ. ಅಂತಹ ರೈತರಿಗೆ ಹಿಂದಿನ ಕಂತುಗಳನ್ನು ನೀಡಲು ಸಿದ್ಧರಿದ್ದೇವೆ. ಅಂತಹ ರೈತರನ್ನು ಗುರುತಿಸಿ ಯೋಜನೆಯಲ್ಲಿ ಸೇರಿಸಲು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಅವರು ಕೋರಿದರು.
ಎಲ್ಲ ಅರ್ಹ ಫಲಾನುಭವಿಗಳು ಕನಿಷ್ಠ ಪ್ರಮಾಣದ ಭೂಮಿ ಹೊಂದಿರಬೇಕು. ಇ-ಕೆವೈಸಿ ಮಾಡಿಸಿಕೊಳ್ಳಬೇಕು ಮತ್ತು ಪಿಎಂ-ಕಿಸಾನ್ ಪೋರ್ಟಲ್‌ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು ಎಂದು ಸಚಿವರು ಹೇಳಿದರು. ನಿಧಿಯನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಮೂರು ಸಮಾನ ಕಂತುಗಳಲ್ಲಿ ವರ್ಗಾಯಿಸಲಾಗುತ್ತದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.