ADVERTISEMENT

ರಾಜಕೀಯ ಒತ್ತಡಕ್ಕೆ ಮಣಿದು ಕೋವ್ಯಾಕ್ಸಿನ್‌ಗೆ ಅನುಮೋದನೆ ನೀಡಿಲ್ಲ: ಕೇಂದ್ರ

ಮಾಧ್ಯಮಗಳ ವರದಿ ತಳ್ಳಿ ಹಾಕಿದ ಕೇಂದ್ರ ಆರೋಗ್ಯ ಸಚಿವಾಲಯ

ಪಿಟಿಐ
Published 17 ನವೆಂಬರ್ 2022, 12:12 IST
Last Updated 17 ನವೆಂಬರ್ 2022, 12:12 IST
ಕೋವ್ಯಾಕ್ಸಿನ್‌ 
ಕೋವ್ಯಾಕ್ಸಿನ್‌    

ನವದೆಹಲಿ: ‘ರಾಜಕೀಯ ಒತ್ತಡಕ್ಕೆ ಮಣಿದು ಕೋವ್ಯಾಕ್ಸಿನ್‌ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ಕೊಟ್ಟಿಲ್ಲ. ಈ ಕುರಿತು ಮಾಧ್ಯಮಗಳಲ್ಲಿ ಬಿತ್ತರವಾಗಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ. ಅವು ನಾಗರಿಕರ ದಾರಿ ತಪ್ಪಿಸುವಂತಿವೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಸ್ಪಷ್ಟನೆ ನೀಡಿದೆ.

‘ಕೋವ್ಯಾಕ್ಸಿನ್‌ ಲಸಿಕೆ ತಯಾರಿಸಿದ್ದ ಭಾರತ್‌ ಬಯೋಟೆಕ್‌ ಕಂಪನಿಯು ರಾಜಕೀಯ ಒತ್ತಡಕ್ಕೆ ಮಣಿದು ಕೆಲ ಪ್ರಕ್ರಿಯೆಗಳನ್ನು ಕೈಬಿಟ್ಟಿತ್ತು. ತರಾತುರಿಯಲ್ಲಿ ಕ್ಲಿನಿಕಲ್‌ ಟ್ರಯಲ್ಸ್‌ ನಡೆಸಿತ್ತು.ಮೂರು ಹಂತದ ಕ್ಲಿನಿಕಲ್‌ ಟ್ರಯಲ್ಸ್‌ ವೇಳೆ ಹಲವು ನಿಯಮಗಳನ್ನು ಉಲ್ಲಂಘಿಸಲಾಗಿತ್ತು’ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಇದನ್ನು ತಳ್ಳಿ ಹಾಕಿರುವ ಸಚಿವಾಲಯ, ‘ಮಾಧ್ಯಮಗಳ ವರದಿಗಳು ಸುಳ್ಳು ಮಾಹಿತಿಗಳಿಂದ ಕೂಡಿವೆ. ಕೇಂದ್ರ ಸರ್ಕಾರ ಹಾಗೂ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆ (ಸಿಡಿಎಸ್‌ಸಿಒ) ವೈಜ್ಞಾನಿಕ ವಿಧಾನ ಹಾಗೂ ನಿಗದಿತ ಮಾನದಂಡಗಳಿಗೆ ಬದ್ಧವಾಗಿಯೇ ಕೋವ್ಯಾಕ್ಸಿನ್‌ ಲಸಿಕೆಯ ತುರ್ತು ಮತ್ತು ನಿರ್ಬಂಧಿತ ಬಳಕೆಗೆ ಅನುಮತಿ ನೀಡಿದ್ದವು’ ಎಂದು ಹೇಳಿದೆ.

ADVERTISEMENT

‘ಸಿಡಿಎಸ್‌ಸಿಒನ ವಿಷಯ ತಜ್ಞರ ಸಮಿತಿಯು (ಎಸ್‌ಇಸಿ) 2021ರ ಜನವರಿ 1 ಮತ್ತು 2ರಂದು ಸಭೆ ನಡೆಸಿ ವಿಸ್ತೃತ ಚರ್ಚೆ ನಡೆಸಿತ್ತು. ಲಸಿಕೆಯ ಸುರಕ್ಷತೆ ಹಾಗೂ ಅದರ ಪ್ರತಿರೋಧಕ ಶಕ್ತಿ ಕುರಿತ ದತ್ತಾಂಶವನ್ನು ಪರಿಶೀಲಿಸಿತ್ತು. ನಾಗರಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೋವ್ಯಾಕ್ಸಿನ್‌ ಲಸಿಕೆಯ ತುರ್ತು ಮತ್ತು ನಿರ್ಬಂಧಿತ ಬಳಕೆಗೆ ಅದು ಶಿಫಾರಸು ಮಾಡಿತ್ತು. ಅದರ ಆಧಾರದಲ್ಲಿಯೇ ಅನುಮತಿ ನೀಡಲಾಗಿತ್ತು’ ಎಂದೂ ಮಾಹಿತಿ ನೀಡಿದೆ.

‘ಭಾರತ್‌ ಬಯೋಟೆಕ್‌ ಕಂಪನಿ ಸಲ್ಲಿಸಿದ್ದ ವೈಜ್ಞಾನಿಕ ದತ್ತಾಂಶಗಳ ಆಧಾರದಲ್ಲಿ ಎಸ್‌ಇಸಿ, ಲಸಿಕೆಯ ಮೂರನೇ ಹಂತದ ಕ್ಲಿನಿಕಲ್‌ ಟ್ರಯಲ್‌ಗೆ ಅನುಮತಿ ನೀಡಿತ್ತು. ಭಾರತದ ಔಷಧ ಮಹಾನಿಯಂತ್ರಕರ (ಡಿಜಿಸಿಐ) ಅನುಮತಿ ಮೇರೆಗೆ ಕ್ಲಿನಿಕಲ್‌ ಟ್ರಯಲ್ಸ್‌ ವಿಧಾನದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಲಾಗಿತ್ತು’ ಎಂದೂ ಸಚಿವಾಲಯ ತಿಳಿಸಿದೆ.

‘ಬಾಹ್ಯ ಒತ್ತಡ ಇರಲಿಲ್ಲ’

ಹೈದರಾಬಾದ್‌: ‘ಲಸಿಕೆಯನ್ನು ತುರ್ತಾಗಿ ಅಭಿವೃದ್ಧಿಪಡಿಸುವ ವಿಚಾರದಲ್ಲಿ ತನ್ನ ಮೇಲೆ ಬಾಹ್ಯ ಒತ್ತಡ ಇರಲಿಲ್ಲ’ ಎಂದು ಭಾರತ್‌ ಬಯೋಟೆಕ್‌ ಕಂಪನಿ ಗುರುವಾರ ಸ್ಪಷ್ಟಪಡಿಸಿದೆ.

‘ಲಸಿಕೆ ತಯಾರಿಕೆ ವಿಚಾರದಲ್ಲಿ ಪರಿಣತಿ ಇಲ್ಲದವರು ಹಾಗೂ ವ್ಯಾಕ್ಸಿನಾಲಜಿ ಬಗ್ಗೆ ಗೊತ್ತಿಲ್ಲದ ಕೆಲವರು ಈ ರೀತಿ ಸುಳ್ಳು ಹಬ್ಬಿಸುತ್ತಿದ್ದಾರೆ. ಅದನ್ನೇ ಇಟ್ಟುಕೊಂಡು ಮಾಧ್ಯಮಗಳು ವರದಿ ಮಾಡಿವೆ. ಜನರ ಜೀವ ಉಳಿಸುವ ದಿಸೆಯಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸುವುದು ನಮ್ಮ ಗುರಿಯಾಗಿತ್ತು. ಈ ವಿಚಾರದಲ್ಲಿ ಆಂತರಿಕ ಒತ್ತಡ ಇತ್ತೇ ಹೊರತು ಹೊರಗಿನವರಿಂದ ಯಾವ ಒತ್ತಡವೂ ಇರಲಿಲ್ಲ’ ಎಂದೂ ಹೇಳಿದೆ.

‘ಜಾಗತಿಕ ಮಾರ್ಗಸೂಚಿಗಳ ಅನುಸಾರವಾಗಿಯೇ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ಜೊತೆಗೆ ಕ್ಲಿನಿಕಲ್‌ ಟ್ರಯಲ್ಸ್‌ ನಡೆಸಲಾಗಿದೆ. ಲಸಿಕೆ ಅಭಿವೃದ್ಧಿಯ ಪ್ರತಿ ಹಂತವನ್ನೂ ದಾಖಲು ಮಾಡಲಾಗಿದೆ’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.