ನವದೆಹಲಿ: ‘ಯುನೆಸ್ಕೊ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ‘ಛತ್ ಪೂಜೆ’ಯನ್ನು ಸೇರಿಸಲು ಸರ್ಕಾರವು ಪ್ರಯತ್ನ ನಡೆಸುತ್ತಿದೆ. ಇದು ಸಾಧ್ಯವಾದರೆ, ಜಗತ್ತಿನ ಮೂಲೆ ಮೂಲೆಯಲ್ಲಿರುವ ಜನರು ಹಬ್ಬದ ವೈಭವ ಹಾಗೂ ದೈವಿಕತೆಯನ್ನು ಅನುಭವಿಸಲು ಸಾಧ್ಯವಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಭಾನುವಾರ ಪ್ರಸಾರಗೊಂಡ ಮಾಸಾಂತ್ಯದ ‘ಮನದ ಮಾತು’ ಕಾರ್ಯಕ್ರಮದ 126ನೇ ಸಂಚಿಕೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೋಲ್ಕತ್ತದ ದುರ್ಗಾ ಪೂಜೆಯನ್ನು ಕೂಡ ಇದೇ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ಹೇಳಿದರು.
‘ನಮ್ಮ ಹಬ್ಬಗಳು ಹಾಗೂ ಆಚರಣೆಗಳು ದೇಶದ ಸಂಸ್ಕೃತಿಯನ್ನು ಜೀವಂತವಾಗಿರುಸುತ್ತವೆ. ಛತ್ ಪವಿತ್ರ ಹಬ್ಬವನ್ನು ದೀಪಾವಳಿ ನಂತರ ಆಚರಿಸಲಾಗುತ್ತದೆ. ಈ ದೊಡ್ಡ ಹಬ್ಬವನ್ನು ಸೂರ್ಯದೇವನಿಗೆ ಸಮರ್ಪಿಸಲಾಗುತ್ತದೆ. ಸೂರ್ಯನಿಗೆ ಅರ್ಘ್ಯ ನೀಡಿ, ನಂತರ ಪೂಜಿಸಲಾಗುತ್ತದೆ. ದೇಶದ ವಿವಿಧೆಡೆ ಮಾತ್ರವಲ್ಲದೆ ಜಗತ್ತಿನಾದ್ಯಂತ ಅದರ ವೈಭವವನ್ನು ಕಾಣಬಹುದಾಗಿದೆ’ ಎಂದು ತಿಳಿಸಿದರು.
ಸಾಹಿತಿ ಎಲ್.ಭೈರಪ್ಪ ಜನಪ್ರಿಯ ಗಾಯಕ ಜುಬೀನ್ ಗರ್ಗ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮನದ ಮಾತು ಕಾರ್ಯಕ್ರಮದಲ್ಲಿ ಸಂತಾಪ ಸಲ್ಲಿಸಿದರು. ‘ದೇಶವು ವಿಚಾರವಾದಿ ಚಿಂತಕ ಭೈರಪ್ಪ ಅವರನ್ನು ಕಳೆದುಕೊಂಡಿದೆ. ನಾನು ಅವರ ಜೊತೆ ವ್ಯಕ್ತಿಗತ ಸಂಪರ್ಕ ಇಟ್ಟುಕೊಂಡಿದ್ದೆ. ಹಲವು ಸಂದರ್ಭಗಳಲ್ಲಿ ಅವರ ಜೊತೆ ವಿಚಾರ ಮಂಥನ ನಡೆದಿತ್ತು. ಅವರ ಕೃತಿಗಳು ಯುವಪೀಳಿಗೆಗೆ ದಾರಿದೀಪವಾಗಿವೆ’ ಎಂದು ತಿಳಿಸಿದರು.
‘ಅಸ್ಸಾಂನ ಹೆಸರಾಂತ ಗಾಯಕರಾದ ಜುಬೀನ್ ಅವರ ಹಾಡುಗಳು ಮುಂದಿನ ಪೀಳಿಗೆಗೆ ಸ್ಫೂರ್ತಿ ತುಂಬಲಿದೆ’ ಎಂದರು. ಕಾರ್ಯಕ್ರಮದ ಮಧ್ಯದಲ್ಲಿ ಭೂಪೇನ್ ಹಜಾರಿಕಾ ಅವರ ಖ್ಯಾತ ಹಾಡು ‘ಮನುಹೇ ಮನುಹರ್ ಬೇಬೆ’ ತಮಿಳು ಹಾಗೂ ಸಿಂಹಳ ಆವೃತ್ತಿಯನ್ನು ನುಡಿಸಲಾಯಿತು. ‘ಸ್ನೇಹಿತರೇ ಭೂಪೇನ್ ಅವರ ಹಾಡುಗಳು ಪ್ರಪಂಚದ ವಿವಿಧ ದೇಶಗಳು ಹೇಗೆ ಸಂಪರ್ಕಿಸುತ್ತವೆ ಎಂಬುದಕ್ಕೆ ಈ ಧ್ವನಿಯೂ ಸಾಕ್ಷಿಯಾಗುತ್ತವೆ’ ಎಂದರು.
‘ನಾನು ಈ ಹಾಡುಗಳನ್ನು ಇತ್ತೀಚಿಗೆ ಹಲವು ಬಾರಿ ಕೇಳಿದ್ದೇನೆ. ಅಸ್ಸಾಂನಲ್ಲಿ ಭೂಪೇನ್ ಅವರ ಶತಮಾನೋತ್ಸವ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದೆನು. ನಿಜಕ್ಕೂ ಅವಿಸ್ಮರಣೀಯ ಕಾರ್ಯಕ್ರಮ’ ಎಂದು ಮೆಲುಕು ಹಾಕಿದರು.
ವಿಜಯದಶಮಿಯಂದು ಆರ್‌ಎಸ್‌ಎಸ್ ಸ್ಥಾಪನೆಯಾಗಿ 100 ವರ್ಷ ಪೂರೈಸಲಿದೆ. ತ್ಯಾಗ ಸೇವೆಯ ಮನೋಭಾವ ಮತ್ತು ಶಿಸ್ತಿನ ಬೋಧನೆಗಳು ಆರ್‌ಎಸ್‌ಎಸ್‌ನ ನಿಜವಾದ ಶಕ್ತಿಯಾಗಿದೆ-ನರೇಂದ್ರ ಮೋದಿ, ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.