ADVERTISEMENT

ಕೇಂದ್ರ ಸರ್ಕಾರದಿಂದ ವೃತ್ತಿ ಸೇವಾ ಪೋರ್ಟಲ್‌ 2.0 ಅನುಷ್ಠಾನಕ್ಕೆ ಸಿದ್ಧತೆ

ನವೆಂಬರ್‌ವರೆಗೆ 3.64 ಕೋಟಿ ಉದ್ಯೋಗಾಕಾಂಕ್ಷಿಗಳ ನೋಂದಣಿ

ಪಿಟಿಐ
Published 30 ಡಿಸೆಂಬರ್ 2023, 16:00 IST
Last Updated 30 ಡಿಸೆಂಬರ್ 2023, 16:00 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಕೇಂದ್ರ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲ ಕಲ್ಪಿಸಲು ರಾಷ್ಟ್ರೀಯ ವೃತ್ತಿ ಸೇವಾ ಪೋರ್ಟಲ್‌ 2.0 (ಎನ್‌ಸಿಎಸ್‌) ಅನುಷ್ಠಾನಕ್ಕೆ ಸಿದ್ಧತೆ ನಡೆಸಿದೆ. 

ರಾಜ್ಯಗಳಲ್ಲಿರುವ ಗಿಗ್‌ ಕೆಲಸಗಾರರು, ಆ್ಯಪ್‌ ಆಧಾರಿತ ವಾಹನ ಚಾಲಕರು, ಆಹಾರ ಪೂರೈಸುವವರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರ ಸುಧಾರಣೆಗೆ ಮುಂದಾಗಿದೆ. ಇದರ ಭಾಗವಾಗಿ ಮುಂದಿನ ವರ್ಷದಲ್ಲಿ ಈ ಪೋರ್ಟಲ್‌ನ ಎರಡನೇ ಆವೃತ್ತಿಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ADVERTISEMENT

‘ನವೀನ ತಂತ್ರಜ್ಞಾನ ಬಳಸಿಕೊಂಡು 2.0 ಆವೃತ್ತಿಯನ್ನು ಸಿದ್ಧಪಡಿಸಲಾಗಿದೆ. ಇದು ಉದ್ಯೋಗ ಹುಡುಕುವವರಿಗೆ ನೆರವಾಗಲಿದೆ’ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್ ಅವರು, ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಉದ್ಯೋಗಕ್ಕೆ ಸಂಬಂಧಿಸಿದಂತೆ ಸೇವೆ ಒದಗಿಸುವ ಈ ಪೋರ್ಟಲ್‌, 2015ರ ಜುಲೈನಿಂದ ಕಾರ್ಯಾರಂಭ ಮಾಡಿತು. ವೃತ್ತಿ ಸಮಾಲೋಚನೆ, ವೃತ್ತಿಪರ ಮಾರ್ಗದರ್ಶನ, ಕೌಶಲ ಅಭಿವೃದ್ಧಿ ಕೋರ್ಸ್‌, ಅಪ್ರೆಂಟಿಸ್‌ಶಿಪ್‌, ಇಂಟರ್ನ್‍ಶಿಪ್‍ ಬಗ್ಗೆ ಈ ಡಿಜಿಟಲ್‌ ವೇದಿಕೆಯು ಮಾಹಿತಿ ನೀಡುತ್ತದೆ.

ಈ ವರ್ಷದ ನವೆಂಬರ್‌ವರೆಗೆ ಪೋರ್ಟಲ್‌ನಲ್ಲಿ 3.64 ಕೋಟಿ ಉದ್ಯೋಗಾಕಾಂಕ್ಷಿಗಳು ಹಾಗೂ 19.15 ಲಕ್ಷ ಉದ್ಯೋಗದಾತ ಸಂಸ್ಥೆಗಳು ಹೆಸರು ನೋಂದಾಯಿಸಿವೆ. 1.92 ಕೋಟಿಗೂ ಹೆಚ್ಚು ಖಾಲಿ ಹುದ್ದೆಗಳ ಬಗ್ಗೆ ಇದರಲ್ಲಿ ದಾಖಲಿಸಲಾಗಿದೆ. 

ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಟ್ಟಿಗೆ ಸಂಯೋಜಿತ ಈ ಪೋರ್ಟಲ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲದೇ, ಖಾಸಗಿ ಉದ್ಯೋಗ ಪೋರ್ಟಲ್‌ಗಳ ಜೊತೆಗೆ ಇದನ್ನು ಸಂಯೋಜಿಸಲಾಗಿದೆ. 

ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಪೋರ್ಟಲ್, ಇ–ಶ್ರರ್ಮ್‌, ಇ‍ಪಿಎಫ್‌ಒ, ಎಂಪಾಯ್ಲೀಸ್‌ ಸ್ಟೇಟ್‌ ಇನ್ಶೂರೆನ್ಸ್‌ ಕಾರ್ಪೊರೇಷನ್, ಡಿಜಿಲಾಕರ್‌ ಸೇರಿದಂತೆ ಸರ್ಕಾರದ ಹಲವು ಪೋರ್ಟಲ್‌ಗಳು ಕೂಡ ಸಂಯೋಜನೆಗೊಂಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.