ADVERTISEMENT

ಹೆಣ್ಣುಮಕ್ಕಳ ವಿವಾಹದ ಕನಿಷ್ಠ ವಯಸ್ಸಿನ ಪರಿಷ್ಕರಣೆ ಬಗ್ಗೆ ಶೀಘ್ರ ನಿರ್ಧಾರ: ಮೋದಿ

ಪಿಟಿಐ
Published 16 ಅಕ್ಟೋಬರ್ 2020, 11:38 IST
Last Updated 16 ಅಕ್ಟೋಬರ್ 2020, 11:38 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ    

ನವದೆಹಲಿ: ಹೆಣ್ಣುಮಕ್ಕಳ ವಿವಾಹದ ಪ್ರಾಪ್ತ ವಯಸ್ಸಿನ ಬಗ್ಗೆ ಅಧ್ಯಯನ ನಡೆಸಲು ರಚನೆಯಾಗಿರುವ ಸಮಿತಿಯಿಂದ ವರದಿ ಬಂದ ನಂತರ, ವಿವಾಹದ ಕನಿಷ್ಠ ವಯಸ್ಸನ್ನು ಪರಿಷ್ಕರಿಸುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಕಳೆದ ಆರು ವರ್ಷಗಳಲ್ಲಿ ಸರ್ಕಾರ ಕೈಗೊಂಡ ಹಲವು ಮಹತ್ತರ ಕ್ರಮಗಳ ಫಲವಾಗಿ ಶಿಕ್ಷಣದಲ್ಲಿ ಹೆಣ್ಣುಮಕ್ಕಳ ಭಾಗವಹಿಸುವಿಕೆ ಹೆಚ್ಚಾಗಿದೆ. ದಾಖಲಾತಿ ಅನುಪಾತದಲ್ಲಿ ದೇಶದಲ್ಲಿ ಮೊದಲ ಬಾರಿಗೆ ಬಾಲಕರಿಗಿಂತ ಬಾಲಕಿಯರು ಹೆಚ್ಚಾಗಿದ್ದಾರೆ ಎಂದು ಪ್ರಧಾನಿ ಹೇಳಿದರು.

ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ)ಯ 75 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ₹75 ನಾಣ್ಯವನ್ನು ಬಿಡುಗಡೆ ಮಾಡಿದ ನರೇಂದ್ರ ಮೋದಿ ಅವರು, ವಿಡಿಯೊ ಸಮಾವೇಶದಲ್ಲಿ ಮಾತನಾಡುತ್ತಾ ಈ ವಿಚಾರ ತಿಳಿಸಿದರು.

ADVERTISEMENT

‘ಹೆಣ್ಣುಮಕ್ಕಳ ವಿವಾಹದ ಪ್ರಾಪ್ತ ವಯಸ್ಸು ಎಷ್ಟಾಗಿರಬೇಕು ಎಂದು ನಿರ್ಧರಿಸಲು ಪ್ರಮುಖ ಚರ್ಚೆ ನಡೆಯುತ್ತಿದೆ. ಇದಕ್ಕಾಗಿ ಸಮಿತಿ ರಚನೆಯಾಗಿದೆ. ಸಮತಿಯ ವರದಿ ಬಗ್ಗೆ ಹೆಣ್ಣು ಮಕ್ಕಳು ಪತ್ರ ಬರೆದು ಮಾಹಿತಿ ಕೇಳುತ್ತಿದ್ದಾರೆ. ಈ ಸಂಬಂಧ ಸರ್ಕಾರ ಯಾವಾಗ ನಿರ್ಧಾರ ಕೈಗೊಳ್ಳುತ್ತದೆ ಎಂದು ಕೇಳಲಾಗುತ್ತಿದೆ. ಸಮಿತಿ ವರದಿ ಬಂದ ನಂತರ ಸರ್ಕಾರ ಈ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ನಾನು ಎಲ್ಲರಿಗೂ ಭರವಸೆ ನೀಡುತ್ತೇನೆ,’ ಎಂದು ಮೋದಿ ತಿಳಿಸಿದರು.
ಆ.15ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲೂ ಪ್ರಧಾನಿ ನರೇಂದ್ರ ಮೋದಿ ಈ ವಿಚಾರ ತಿಳಿಸಿದ್ದರು. ‘ಹೆಣ್ಣುಮಕ್ಕಳ ವಿವಾಹದ ಕನಿಷ್ಠ ವಯಸ್ಸು ಏನಾಗಿರಬೇಕು ಎಂಬುದರ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಸಮಿತಿ ರಚಿಸಲಾಗಿದೆ,’ ಎಂದು ಹೇಳಿದ್ದರು.

ಪ್ರಸ್ತುತ, ಮದುವೆಯ ಕನಿಷ್ಠ ವಯಸ್ಸು ಹೆಣ್ಣುಮಕ್ಕಳಿಗೆ 18 ವರ್ಷ ಆಗಿದ್ದರೆ, ಪುರುಷರಿಗೆ 21 ವರ್ಷ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.