
ಗ್ರಾಕಾ ಮ್ಯಾಚೆಲ್
ಚಿತ್ರ: ಪಿಟಿಐ
ನವದೆಹಲಿ: 2025ನೇ ಸಾಲಿನ ಇಂದಿರಾ ಗಾಂಧಿ ಶಾಂತಿ ನಿಶ್ಯಸ್ತ್ರೀಕರಣ ಮತ್ತು ಅಭಿವೃದ್ಧಿ ಪ್ರಶಸ್ತಿಗೆ ಮೊಜಾಂಬಿಕ್ ಹಕ್ಕುಗಳ ಕಾರ್ಯಕರ್ತೆ ಗ್ರಾಕಾ ಮ್ಯಾಚೆಲ್ ಅವರು ಆಯ್ಕೆಯಾಗಿದ್ದಾರೆ.
ಭಾರತದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಅಧ್ಯಕ್ಷತೆಯ ಅಂತರರಾಷ್ಟ್ರೀಯ ತೀರ್ಪುಗಾರರ ಸಮಿತಿಯು ಈ ಪ್ರತಿಷ್ಠಿತ ಪ್ರಶಸ್ತಿಗೆ ಮ್ಯಾಚೆಲ್ ಅವರನ್ನು ಆಯ್ಕೆ ಮಾಡಿದೆ.
ಬಿಕ್ಕಟ್ಟಿನ ಸಂದರ್ಭಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಪೋಷಣೆ, ಆರ್ಥಿಕ ಸಬಲೀಕರಣ ಮತ್ತು ಮಾನವೀಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಮ್ಯಾಚೆಲ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ತಿಳಿಸಿದೆ.
ಮ್ಯಾಚೆಲ್ ಓರ್ವ ಆಫ್ರಿಕನ್ ಮಹಿಳೆ. ಅವರು ಮಹಿಳಾ ಮತ್ತು ಮಕ್ಕಳ ಹಕ್ಕುಗಳಿಗಾಗಿ ಹೋರಾಟ ಮಾಡಿದವರು. ರಾಜಕಾರಣಿ ಮತ್ತು ಮಾನವತಾವಾದಿ. ಅವರು ತಮ್ಮ ಜೀವನದುದ್ದಕ್ಕೂ ಮಾನವ ಹಕ್ಕುಗಳ ರಕ್ಷಣೆಗಾಗಿ ತೊಡಗಿಸಿಕೊಂಡಿದ್ದವರು.
‘ಎಲ್ಲರಿಗೂ ಸಮಾನ ನ್ಯಾಯ ಮತ್ತು ಸಮ ಸಮಾಜವನ್ನು ನಿರ್ಮಿಸುವ ಮೂಲಕ ದುರ್ಬಲ ಸಮುದಾಯಗಳ ಜೀವನವನ್ನು ಸುಧಾರಿಸಲು ಮ್ಯಾಚಲ್ ಅವರು ತಮ್ಮ ಜೀವನದುದ್ದಕ್ಕೂ ಹೋರಾಟ ಮಾಡಿದ್ದಾರೆ’ ಎಂದು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ಹೇಳಿದೆ.
ಅವರು 1945ರ ಅಕ್ಟೋಬರ್ 17ರಂದು ಮೊಜಾಂಬಿಕ್‌ನ ಗ್ರಾಕಾ ಸಿಂಬಿನ್ ಎಂಬ ಪ್ರದೇಶದಲ್ಲಿ ಜನಿಸಿದರು. ಮೆಥೋಡಿಸ್ಟ್ ಮಿಷನ್ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಪಡೆದ ಅವರು, ನಂತರ ಲಿಸ್ಬನ್ ವಿಶ್ವವಿದ್ಯಾಲಯದಲ್ಲಿ ಜರ್ಮನ್ ಭಾಷೆಯಲ್ಲಿ ಶಿಕ್ಷಣ ಪಡೆದುಕೊಂಡರು. ಅಲ್ಲಿ ಅವರಿಗೆ ಸ್ವಾತಂತ್ರ್ಯ ಹಾಗೂ ರಾಜಕೀಯದ ಪ್ರಜ್ಞೆ ಮೂಡಿತ್ತು.
1973ರಲ್ಲಿ ಮೊಜಾಂಬಿಕ್‌ಗೆ ಹಿಂದಿರುಗಿದ ಬಳಿಕ, ಅವರು ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಶಿಕ್ಷಕಿಯಾಗಿ ಮೊಜಾಂಬಿಕನ್ ಲಿಬರೇಶನ್ ಫ್ರಂಟ್ (FRELIMO) ಗೆ ಸೇರಿಕೊಂಡರು. 1975ರಲ್ಲಿ ಮೊಜಾಂಬಿಕ್ ಸ್ವಾತಂತ್ರ್ಯ ಪಡೆದ ನಂತರ, ಅವರು ಮೊಜಾಂಬಿಕ್‌ನ ಮೊದಲ ಶಿಕ್ಷಣ ಮತ್ತು ಸಂಸ್ಕೃತಿ ಸಚಿವರಾದರು.
ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಏರಿಕೆಯಾಯಿತು. ಪುರುಷರ ಪ್ರಮಾಣ ಶೇ 40 ರಿಂದ ಶೇ 90ಕ್ಕೆ ಮತ್ತು ಮಹಿಳೆಯರು ಶೇ 75 ಕ್ಕಿಂತ ಹೆಚ್ಚಾಯಿತು.
1990ರ ದಶಕದಲ್ಲಿ, ಮ್ಯಾಚೆಲ್ ಅವರು ಜಾಗತಿಕವಾಗಿ ತಮ್ಮ ಸೇವೆಯನ್ನು ವಿಸ್ತರಿಸಿದರು. ವಿಶ್ವಸಂಸ್ಥೆ, ಮಕ್ಕಳ ಮೇಲೆ ಸಶಸ್ತ್ರ ಸಂಘರ್ಷದ ಪ್ರಭಾವದ ಕುರಿತು ಅಧ್ಯಯನ ನಡೆಸಲು ಅವರನ್ನು ನೇಮಿಸಿತು.
1996ರಲ್ಲಿ ಅವರು ತಮ್ಮ ವರದಿ ಸಲ್ಲಿಸಿದರು. ಈ ವರದಿ ಮಕ್ಕಳ ಮೇಲೆ ಸಶಸ್ತ್ರ ಸಂಘರ್ಷದ ಪರಿಣಾಮ, ವಿಶ್ವಸಂಸ್ಥೆ ಮತ್ತು ಅದರ ಸದಸ್ಯ ರಾಷ್ಟ್ರಗಳು ಯುದ್ಧ ವಲಯಗಳಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದರ ಮೇಲೆ ನೇರ ಪರಿಣಾಮ ಬೀರಿತು. ಅವರ ದಣಿವರಿಯದ ಕೆಲಸಕ್ಕಾಗಿ, ವಿಶ್ವಸಂಸ್ಥೆಯ ‘ನ್ಯಾನ್ಸೆನ್’ ನಿರಾಶ್ರಿತರ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
1997 ರಲ್ಲಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್‌ನ ಗೌರವಾನ್ವಿತ ಡೇಮ್ ಕಮಾಂಡರ್ ಆಗಿ ನೇಮಕಗೊಂಡರು
ಇತ್ತೀಚಿನ ವರ್ಷಗಳಲ್ಲಿ, ಮ್ಯಾಚೆಲ್ ಅವರು ತಮ್ಮದೇ ಆದ ಸಂಸ್ಥೆಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. 2010ರಲ್ಲಿ, ಅವರು ಮಹಿಳೆಯರ ಆರ್ಥಿಕ ಸಬಲೀಕರಣ, ಆಹಾರ ಭದ್ರತೆ ಮತ್ತು ಉತ್ತಮ ಆಡಳಿತ ಉತ್ತೇಜಿಸುವ ಗ್ರಾಕಾ ಮ್ಯಾಚೆಲ್ ಟ್ರಸ್ಟ್ ಅನ್ನು ಸ್ಥಾಪಿಸಿದರು.
ಜಿಜಿಲೆ ಇನ್ಸ್ಟಿಟ್ಯೂಟ್ ಫಾರ್ ಚೈಲ್ಡ್ ಡೆವಲಪ್ಮೆಂಟ್ ಅನ್ನು ಸಹ ಸ್ಥಾಪಿಸಿದರು. 2018 ರಲ್ಲಿ, ಮಹಿಳೆಯರು ಮತ್ತು ಹದಿಹರೆಯದವರ ಯೋಗಕ್ಷೇಮಕ್ಕೆ ಅವರು ನೀಡಿದ ಸೇವೆಗಾಗಿ ವಿಶ್ವ ಆರೋಗ್ಯ ಸಂಸ್ಥೆಯ ಅತ್ಯುನ್ನತ ಗೌರವವಾದ WHO ಚಿನ್ನದ ಪದಕಕ್ಕೂ ಭಾಜನರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.