ದೆಹಲಿಯ ಸಿಗ್ನೇಚರ್ ಸೇತುವೆಯ ಮೇಲೆ ಗುರುವಾರ ಬೆಳಿಗ್ಗೆ ಆವರಿಸಿದ್ದ ಹೊಂಜಿನಲ್ಲಿ ವಾಹನಗಳು ಸಂಚರಿಸಿದವು
–ಪಿಟಿಐ ಚಿತ್ರ
ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಜಿಆರ್‌ಎಪಿ–3ರ (ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲ್ಯಾನ್) ಅಡಿಯಲ್ಲಿ ಕಠಿಣ ಕ್ರಮಗಳನ್ನು ಇಂದಿನಿಂದ ಮತ್ತೆ ಜಾರಿಗೊಳಿಸಲಾಗಿದೆ.
ಜಿಆರ್‌ಎಪಿ–3ರ ಅಡಿಯಲ್ಲಿ ಎಲ್ಲಾ ಕ್ರಮಗಳನ್ನು ತಕ್ಷಣವೇ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ರಚಿಸಿರುವ ವಾಯು ಗುಣಮಟ್ಟ ಸಮಿತಿ ತಿಳಿಸಿರುವುದಾಗಿ ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
ಚಳಿಗಾಲದಲ್ಲಿ ಅನುಸರಿಸುವ ಮಾಲಿನ್ಯ ನಿಯಂತ್ರಣ ಕ್ರಮಗಳ ಅಡಿಯಲ್ಲಿ ಹೊರಡಿಸಿದ್ದ ಮೂರು ಮತ್ತು ನಾಲ್ಕನೆಯ ಹಂತಗಳ ನಿರ್ಬಂಧಗಳನ್ನು ವಾಯು ಗುಣಮಟ್ಟ ಸಮಿತಿ ಈಚೆಗೆ ಹಿಂಪಡೆದಿತ್ತು. ಇದರಿಂದಾಗಿ ನಿರ್ಬಂಧಗಳನ್ನು ಜಿಆರ್‌ಎಪಿ ಎರಡನೆಯ ಹಂತಕ್ಕೆ ತಗ್ಗಿಸಿದ್ದು, ಕಠಿಣವಾದ ಕ್ರಮಗಳನ್ನು ಹಿಂಪಡೆಯಲಾಗಿತ್ತು.
ವಾಯು ಗುಣಮಟ್ಟ ಸೂಚ್ಯಂಕವು ಸುಧಾರಿಸಿದ ಕಾರಣಕ್ಕೆ, ಜಿಆರ್‌ಎಪಿ–4 ನಿರ್ಬಂಧಗಳನ್ನು ಎರಡನೆಯ ಹಂತಕ್ಕೆ ಸಡಿಲಿಸಲು ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ (ಸಿಎಕ್ಯೂಎಂ) ಸುಪ್ರೀಂ ಕೋರ್ಟ್ ಸಮ್ಮತಿ ನೀಡಿತ್ತು.
ವಾಯು ಗುಣಮಟ್ಟ ಸೂಚ್ಯಂಕವು 350ರ ಗಡಿಯನ್ನು ದಾಟಿದರೆ ಮಾತ್ರ ಮೂರನೆಯ ಹಂತದ ನಿರ್ಬಂಧಗಳನ್ನು ಜಾರಿಗೆ ತರುವಂತೆ ಸಿಎಕ್ಯೂಎಂಗೆ ಕೋರ್ಟ್ ಸೂಚನೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.