ADVERTISEMENT

ಲಖನೌ | ವರದಕ್ಷಿಣೆ ತರುವಂತೆ ಕಿರುಕುಳ: ಮಗನ ಮುಂದೆಯೇ ಮಹಿಳೆಯ ಜೀವಂತ ದಹನ!

ಕಸ್ಟಡಿ ವೇಳೆ ತಪ‍್ಪಿಸಿಕೊಳ್ಳಲು ಯತ್ನ; ಆರೋಪಿಗೆ ಪೊಲೀಸರಿಂದ ಗುಂಡೇಟು

ಪಿಟಿಐ
Published 24 ಆಗಸ್ಟ್ 2025, 15:48 IST
Last Updated 24 ಆಗಸ್ಟ್ 2025, 15:48 IST
ಮೃತ ನಿಕ್ಕಿ ಜೊತೆ ವಿಪಿನ್
ಮೃತ ನಿಕ್ಕಿ ಜೊತೆ ವಿಪಿನ್   

ಲಖನೌ: ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ ಪತಿ, ತಾಯಿ ಜೊತೆ ಸೇರಿಕೊಂಡು ಪತ್ನಿಗೆ ಬೆಂಕಿ ಹಚ್ಚಿದ ಪ್ರಕರಣ ಇಲ್ಲಿನ ಗ್ರೇಟರ್‌ ನೋಯ್ಡಾದಲ್ಲಿ ನಡೆದಿದೆ.

ಮಗನ ಮುಂದೆಯೇ ಈ ಕೃತ್ಯ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯು  ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ವಶಕ್ಕೆ ಪಡೆದರು. ಶನಿವಾರ ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ  ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ  ಗುಂಡು ಹೊಡೆದಿದ್ದು, ಕಾಲಿಗೆ ಗಾಯವಾಗಿದೆ. 

ADVERTISEMENT

ಪ್ರಕರಣ ಏನು?:

ನೋಯ್ಡಾದ ಸಿರ್ಸಾ ಗ್ರಾಮದ ವಿಪಿನ್‌ ಅವರನ್ನು ನಿಕ್ಕಿ ಎಂಬುವವರು 2016ರಲ್ಲಿ ಮದುವೆಯಾಗಿದ್ದರು. ಸಂತ್ರಸ್ತೆಯ ಸಹೋದರಿ ಕಾಂಚನಾ ಅವರು ವಿಪಿನ್‌ ಸಹೋದರ ರೋಹಿತ್‌ ಅವರನ್ನು ವರಿಸಿದ್ದರು.

ವರದಕ್ಷಿಣೆ ವಿಚಾರವಾಗಿ ವಿಪಿನ್‌ ಹಾಗೂ ಆಕೆಯ ತಾಯಿ ಸೇರಿಕೊಂಡು ಗುರುವಾರ ನಿಕ್ಕಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ನಂತರ, ಆಕೆಯ ಮೇಲೆ ಉರಿಯುವ ದ್ರವವನ್ನು ಚೆಲ್ಲಿ, ಲೈಟರ್‌ನಿಂದ ಬೆಂಕಿ ಹಚ್ಚಿದ್ದಾರೆ. ಮೈ ಮೇಲೆ ಬೆಂಕಿ ಹತ್ತಿದ್ದರಿಂದ ತಪ್ಪಿಸಿಕೊಂಡು ಮೆಟ್ಟಿಲಿನಿಂದ ಕೆಳಗಿಳಿದು ಬರುವ ವೇಳೆ, ಕುಸಿದು ಬಿದ್ದಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಕೂಡ ತೀವ್ರವಾದ ಗಾಯಗಳಿಂದ ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಬಂಧನದ ವೇಳೆ ಪರಾರಿ ಯತ್ನ:

‘ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಿನ್‌ ಅನ್ನು ವಶಕ್ಕೆ ಪಡೆದು ಆತನ ಮನೆಯಿಂದ ಸಂತ್ರಸ್ತೆಯ ಮೈ ಮೇಲೆ ಚೆಲ್ಲಲಾದ ದಹಿಸುವ ದ್ರವವನ್ನು ವಶಕ್ಕೆ ಪಡೆಯಲಾಗಿತ್ತು. ವಿಚಾರಣೆ ನಡೆಸಿದ್ದ ಪೊಲೀಸರು ಶನಿವಾರ ವೈದ್ಯಕೀಯ ಪರೀಕ್ಷೆಗೆ ಆರೋಪಿಯನ್ನು  ಕರೆದೊಯ್ಯುತ್ತಿದ್ದ ವೇಳೆ ಪಿಸ್ತೂಲ್‌ ಕಿತ್ತುಕೊಂಡು, ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಪೊಲೀಸರು ಪ್ರತಿ ದಾಳಿ ನಡೆಸಿ ಆತನ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆದಿದ್ದಾರೆ’ ಎಂದು ಗೌತಮ್‌ ಬುದ್ಧ ನಗರ ಪೊಲೀಸ್‌ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ನಾನು ಪತ್ನಿಯನ್ನು ಕೊಲೆ ಮಾಡಿಲ್ಲ, ಆಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಪೊಲೀಸರ ಮುಂದೆ  ವಿಪಿನ್‌ ಹೇಳಿಕೆ ನೀಡಿದ್ದಾನೆ.  

ವಿಪಿನ್‌ ತಾಯಿ ದಯಾವತಿ (55) ಅವರನ್ನು ಕಾಸನಾ ಪೊಲೀಸರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಬಂಧಿಸಿದ್ದಾರೆ.

ನಿಕ್ಕಿಯ ಸಹೋದರಿ ಕಾಂಚನಾ ಅವರೇ  ಬೆಂಕಿ ಹಚ್ಚಿರುವುದನ್ನು ವಿಡಿಯೊ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

‘ನನಗೆ ಹಾಗೂ ಸಹೋದರಿಗೆ ವರದಕ್ಷಿಣೆ ವಿಚಾರವಾಗಿ ಹಲವು ದಿನಗಳಿಂದ ಹಿಂಸೆ ನೀಡಲಾಗುತ್ತಿತ್ತು. ಆಕೆಯ ಕುತ್ತಿಗೆ ಹಾಗೂ ತಲೆಗೆ ಬಲವಾಗಿ ಹೊಡೆದು ಆ್ಯಸಿಡ್‌ ಚೆಲ್ಲಿದ್ದರು, ನಂತರ ಬೆಂಕಿ ಹಚ್ಚಿ ಸುಟ್ಟುಹಾಕಿದರು’ ಎಂದು ನಿಕ್ಕಿ ಸಹೋದರಿ ಕಾಂಚನ ಅವರು ಪತ್ರಕರ್ತರಿಗೆ ತಿಳಿಸಿದ್ದಾರೆ.

‘ಸಹೋದರಿ ಮೇಲೆ ಹಲ್ಲೆ ನಡೆಸುತ್ತಿದ್ದ ನಾನು ಮಧ್ಯಪ್ರವೇಶಿಸಲು ಮುಂದಾದೆ. ಆ ವೇಳೆ, ನನ್ನ ಮೇಲೂ ಹಲ್ಲೆ ನಡೆಸಿದರು, ಇದರಿಂದ ಅನಿವಾರ್ಯವಾಗಿ ವಿಡಿಯೊ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದೇನೆ’ ಎಂದು ಹೇಳಿದ್ದಾರೆ.

ಕಾಂಚನಾ ನೀಡಿದ ದೂರಿನಂತೆ ಕಾಸನಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

‘ಸ್ಕಾರ್ಪಿಯೊ ಬೈಕ್‌ ಉಡುಗೊರೆ’
‘ಮದುವೆ ವೇಳೆ ಅಳಿಯನಿಗೆ ಸ್ಕಾರ್ಪಿಯೊ ಎಸ್‌ಯುವಿ ಮನೆ ಬಳಕೆಯ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಇದಾದ ಬಳಿಕವೂ ₹36 ಲಕ್ಷ ನಗದು ತರುವಂತೆ ಪತಿ ಹಾಗೂ ಆಕೆಯ ಕುಟುಂಬದ ಸದಸ್ಯರು ಮಗಳಿಗೆ ಕಿರುಕುಳ ನೀಡುತ್ತಿದ್ದರು’ ಮೃತ ನಿಕ್ಕಿಯ ತಂದೆ ಭಿಕಾರಿ ಸಿಂಗ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.