
ನೋಯಿಡಾ: ಮಹಿಳೆಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ, ಅವರ ಹೊಟ್ಟೆಯೊಳಗೆ ಬಟ್ಟೆಯನ್ನು ಹಾಗೆಯೇ ಬಿಟ್ಟ ಗ್ರೇಟರ್ ನೋಯ್ಡಾದ ಖಾಸಗಿ ಆಸ್ಪತ್ರೆಯ ವೈದ್ಯರು ಮತ್ತು ಹಿರಿಯ ಆರೋಗ್ಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಗ್ರೇಟರ್ ನೋಯ್ಡಾದ ಸೆಕ್ಟರ್ ಡೆಲ್ಟಾ ಒನ್ ನಿವಾಸಿ ಅನ್ಸುಲ್ ವರ್ಮಾ ಸಂತ್ರಸ್ತ ಮಹಿಳೆ. ಜೀವನೋಪಾಯಕ್ಕಾಗಿ ಮನೆಗೆಲಸ ಮತ್ತು ಹೊಲಿಗೆ ಕೆಲಸ ಮಾಡುವ ಅವರು, 2023ರ ನವೆಂಬರ್ 14ರಂದು ತುಘಲಕ್‌ಪುರದ ಬಕ್ಸನ್ ಆಸ್ಪತ್ರೆಯಲ್ಲಿ ಹೆರಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಶಸ್ತ್ರಚಿಕಿತ್ಸೆಯ ನಂತರ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ನಿರಂತರ ಹೊಟ್ಟೆ ನೋವನ್ನು ಅನುಭವಿಸಿದ್ದಾರೆ. 2025ರ ಏಪ್ರಿಲ್‌ನಲ್ಲಿ ಗ್ರೇಟರ್ ನೋಯ್ಡಾದ ಕೈಲಾಶ್ ಆಸ್ಪತ್ರೆಯು ಅವರ ಹೊಟ್ಟೆಯಲ್ಲಿ ಗಡ್ಡೆಯನ್ನು ಪತ್ತೆಹಚ್ಚಿ, ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿತ್ತು. ಈ ವೇಳೆ ವೈದ್ಯರು ಅವರ ಹೊಟ್ಟೆಯಿಂದ ಬಟ್ಟೆಯನ್ನು ಹೊರೆತೆಗೆದಿದ್ದಾರೆ.
‘ಹೆರಿಗೆ ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ಅರ್ಧ ಮೀಟರ್ ಉದ್ದದ ಶಸ್ತ್ರಚಿಕಿತ್ಸಾ ಬಟ್ಟೆಯನ್ನು ಹೊಟ್ಟೆಯೊಳಗೆ ಬಿಟ್ಟಿದ್ದರು. ಇದರಿಂದಾಗಿ ನಾನು ಸುಮಾರು ಒಂದೂವರೆ ವರ್ಷಗಳ ಕಾಲ ತೀವ್ರ ನೋವನ್ನು ಅನುಭವಿಸಿದ್ದೇನೆ’ ಎಂದು ಅವರು ಆರೋಪಿಸಿದ್ದಾರೆ.
ನ್ಯಾಯಾಲಯದ ನಿರ್ದೇಶನದ ಮೇರೆಗೆ, ಪೊಲೀಸರು ಡಿಸೆಂಬರ್ 24ರಂದು ವೈದ್ಯರು, ಹಿರಿಯ ಆರೋಗ್ಯ ಅಧಿಕಾರಿಗಳು ಸೇರಿದಂತೆ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.