ADVERTISEMENT

ಹಸಿರು ಪಟಾಕಿಗೆ ಷರತ್ತುಬದ್ಧ ಅನುಮತಿ: ‘ಸಮತೋಲಿತ ವಿಧಾನ’ ಜಾರಿಗೆ SC ಸೂಚನೆ

ಪಿಟಿಐ
Published 26 ಸೆಪ್ಟೆಂಬರ್ 2025, 13:34 IST
Last Updated 26 ಸೆಪ್ಟೆಂಬರ್ 2025, 13:34 IST
<div class="paragraphs"><p>ಸಿಎಸ್‌ಆರ್‌ಐ ಅಭಿವೃದ್ಧಿಪಡಿಸಿರುವ ಹಸಿರು ಪಟಾಕಿ </p></div>

ಸಿಎಸ್‌ಆರ್‌ಐ ಅಭಿವೃದ್ಧಿಪಡಿಸಿರುವ ಹಸಿರು ಪಟಾಕಿ

   

– ಪಿಟಿಐ ಚಿತ್ರ 

ನವದೆಹಲಿ: ದೆಹಲಿ –ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ವಾಯು ಮಾಲಿನ್ಯ ಹೆಚ್ಚುತ್ತಿದೆ ಎಂಬ ಕಳವಳದ ನಡುವೆಯೇ, ಹಸಿರು ಪಟಾಕಿ ಬಳಕೆಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಷರತ್ತುಬದ್ಧ ಅನುಮತಿ ನೀಡಿದೆ. 

ADVERTISEMENT

ದೆಹಲಿ– ಎನ್‌ಸಿಆರ್‌ ವಲಯದಲ್ಲಿ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಎಂ.ಸಿ ಮಹ್ತಾ ಅವರ 1985ರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಕೋರ್ಟ್‌ ಈ ಆದೇಶ ನೀಡಿದೆ. ದೆಹಲಿ– ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಹಸಿರು ಪಟಾಕಿಗಳನ್ನು ಅನುಮತಿ ಇಲ್ಲದೆ ಮಾರಾಟ ಮಾಡುವಂತಿಲ್ಲ ಎಂಬ ಷರತ್ತನ್ನು ನ್ಯಾಯಾಲಯ ವಿಧಿಸಿದೆ.

‘ಮಾಲಿನ್ಯ ತಗ್ಗಿಸುವುದು ಅತ್ಯುನ್ನತವಾದರೂ, ಪಟಾಕಿಯ ಸಂಪೂರ್ಣ ನಿಷೇಧವು ಇದಕ್ಕೆ ಪ್ರಾಯೋಗಿಕ ಅಥವಾ ಮಾದರಿಯಾದ ಕ್ರಮವಲ್ಲ’ ಎಂದು  ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿತು. 

ಬಿಹಾರದ ದೃಷ್ಟಾಂತ ನೀಡಿದ ನ್ಯಾಯಪೀಠ, ಅಲ್ಲಿ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ ನಂತರ, ಅಕ್ರಮ ಗಣಿಗಾರಿಕೆ ಮಾಫಿಯಾ ಹೇಗೆ ಶಕ್ತವಾಗಿ ಬೆಳೆಯಿತು ಎನ್ನುವುದನ್ನು ವಿವರಿಸಿತು. ಹೀಗಾಗಿ ದೆಹಲಿಯಲ್ಲಿ ಪಟಾಕಿ ಬಳಕಗೆ ಸಂಪೂರ್ಣ ನಿಷೇಧ ಹೇರುವ ಮೊದಲು, ಇಂತಹ ಪಟಾಕಿ ತಯಾರಿಕಾ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಜೀವನೋಪಾಯದ ಹಕ್ಕುಗಳನ್ನೂ ಗಮನದಲ್ಲಿಟ್ಟುಕೊಂಡು ‘ಸಮತೋಲಿತ ಕ್ರಮ’ ಕೈಗೊಳ್ಳುವಂತೆ  ಸೂಚಿಸಿತು.

ಈ ಬಗ್ಗೆ ಮುಂದಿನ ವಿಚಾರಣೆ ಅಕ್ಟೋಬರ್‌ 8ರಂದು ನಡೆಯಲಿದೆ. ಅದಕ್ಕೂ ಮುನ್ನ ಪಟಾಕಿ ತಯಾರಕರು, ಮಾರಾಟಗಾರರು ಮತ್ತು ಅಧಿಕಾರಿಗಳ ಸಭೆ ನಡೆಸಿ ಸ್ಪಷ್ಟವಾದ, ಸಮತೋಲಿತ ಮಾರ್ಗಸೂಚಿ ರೂಪಿಸುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ (ಎಂಒಇಎಫ್‌ಸಿಸಿ) ಸಚಿವಾಲಯಕ್ಕೆ ಕೋರ್ಟ್‌ ಆದೇಶಿಸಿತು. ಈ ಬಗ್ಗೆ ಸಮನ್ವಯ ಸಾಧಿಸುವಂತೆ ಕೇಂದ್ರದ ಪರವಾಗಿ ಹಾಜರಾದ ಹಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯಾ ಭಾಟಿ ಅವರಿಗೆ ನ್ಯಾಯಪೀಠ ಸೂಚಿಸಿತು.olicy.

ಪ್ರಮಾಣೀಕೃತ ತಯಾರಕರಿಗೆ ಅವಕಾಶ
ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಎನ್‌ಇಇಆರ್‌ಐ) ಮತ್ತು ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯಿಂದ (ಪಿಇಎಸ್‌ಒ) ಹಸಿರು ಪಟಾಕಿ ತಯಾರಿಕೆಗೆ ಪ್ರಮಾಣಪತ್ರ ಪಡೆದಿರುವ ತಯಾರಕರಿಗೆ ಮುಂದಿನ ಆದೇಶದವರೆಗೆ ಪಟಾಕಿ ತಯಾರಿಕೆಗೆ ಅನುಮತಿ ನೀಡುತ್ತೇವೆ. ಆದರೆ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಈ ಪಟಾಕಿಗಳನ್ನು ಮಾರಾಟ ಮಾಡಲು ಅನುಮತಿ ಪಡೆಯುವುದು ಕಡ್ಡಾಯ ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ನ್ಯಾಯಮೂರ್ತಿಗಳಾದ  ಕೆ. ವಿನೋದ್‌ ಚಂದ್ರನ್‌ ಮತ್ತು ಎನ್‌.ವಿ ಅಂಜಾರಿಯಾ ಅವರನ್ನೊಳಗೊಂಡ ಪೀಠವು ಹೇಳಿದೆ.

ಸಡಿಲಿಕೆ ತಿರಸ್ಕರಿಸಿದ್ದ ನ್ಯಾಯಪೀಠ

ನ್ಯಾಯಮೂರ್ತಿ ಎ.ಎಸ್‌. ಒಕಾ ಅವರ ಪೀಠವು ದೆಹಲಿ– ಎನ್‌ಸಿಆರ್‌ನಲ್ಲಿ ಪಟಾಕಿ ತಯಾರಿಕೆ ಮಾರಾಟ ಮತ್ತು ಸಂಗ್ರಹದ ಮೇಲೆ ಹೇರಿರುವ ಸಂಪೂರ್ಣ ನಿಷೇಧವನ್ನು ಸಡಿಲಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಏ.3ರಂದು  ತಿರಸ್ಕರಿಸಿತ್ತು.

ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿತ್ತು. ಶುಕ್ರವಾರ ಪಟಾಕಿ ತಯಾರಕರ ಪರವಾಗಿ ಹಾಜರಾದ ವಕೀಲರಾದ ಬಲಬೀರ್‌ ಸಿಂಗ್‌ ಮತ್ತು ಕೆ. ಪರಮೇಶ್ವರ್‌ ‘ದೆಹಲಿ ಎನ್‌ಸಿಆರ್‌ನಲ್ಲಿ ಚಳಿಗಾಲದ ಮಾಲಿನ್ಯ ಸಮಯದಲ್ಲಿ ಹೇರಿದ್ದ ಸಂಪೂರ್ಣ ಪಟಾಕಿ ನಿಷೇಧವನ್ನು ವರ್ಷಪೂರ್ತಿ ವಿಸ್ತರಿಸಲಾಗಿದೆ. ಇದನ್ನು ಸಡಿಲಿಸಬೇಕು ಹಾಗೂ ಪಟಾಕಿ ತಯಾರಿಕೆಗೆ ಷರತ್ತುಬದ್ಧ ಅನುಮತಿ ನೀಡಬೇಕು’ ಎಂದು ಕೋರಿದರು.

ವಾದವನ್ನು ಆಲಿಸಿದ ನ್ಯಾಯಪೀಠ ‘ದೆಹಲಿಯಲ್ಲಿ  ಪಟಾಕಿ ಬಳಕೆಗೆ ಸಂಪೂರ್ಣ ನಿಷೇಧ ಹೇರುವುದರ ಬಗ್ಗೆ ಇನ್ನೊಮ್ಮೆ ಪರಿಶೀಲನೆ ನಡೆಸುವಂತೆ’ ಸರ್ಕಾರಕ್ಕೆ ಸೂಚಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.