ADVERTISEMENT

ಜಲಂಧರ್‌: ಕೋವಿಡ್ ಸೋಂಕಿತ ವ್ಯಕ್ತಿಯಲ್ಲಿ ಹಸಿರು ಶಿಲೀಂದ್ರ ದೃಢ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 9:11 IST
Last Updated 21 ಜೂನ್ 2021, 9:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಲಂಧರ್ (ಪಂಜಾಬ್‌): ಪಂಜಾಬ್‌ನಲ್ಲಿ ಇದೇ ಮೊದಲ ಬಾರಿಗೆ ಕೋವಿಡ್‌ ಸೋಂಕಿತ ರೋಗಿಯೊಬ್ಬರಲ್ಲಿ ಹಸಿರು ಶಿಲೀಂದ್ರ (ಅಸ್ಪರ್ಜಿಲೋಸಿಸ್‌) ಸೋಂಕು ಪತ್ತೆಯಾಗಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಜಲಂಧರ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೋವಿಡ್‌ ಸೋಂಕಿತರೊಬ್ಬರಲ್ಲಿ ಈ ಹಸಿರು ಫಂಗಸ್‌ ಕಾಣಿಸಿಕೊಂಡಿದೆ ಎಂದು ಇಲ್ಲಿನ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಪರಮ್‌ ವೀರ್‌ ಸಿಂಗ್‌ ತಿಳಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಮೊದಲ ಪ್ರಕರಣ ವರದಿಯಾಗಿತ್ತು.‌

ADVERTISEMENT

60 ವರ್ಷದ ರೋಗಿ:‘60 ವರ್ಷದ ರೋಗಿಯೊಬ್ಬರಿಗೆ ಈ ಹಸಿರು ಫಂಗಸ್‌ ಕಾಣಿಸಿಕೊಂಡಿದೆ. ಅವರ ಮೇಲೆ ಇದೀಗ ನಿಗಾ ವಹಿಸಲಾಗಿದೆ. ಇದಕ್ಕೂ ಮುಂಚೆ ಪರೀಕ್ಷಿಸಿದ ವ್ಯಕ್ತಿಯೊಬ್ಬರಲ್ಲೂ ಇಂತಹ ಲಕ್ಷಣ ಕಾಣಿಸಿತ್ತು. ಆದರೆ ಅದು ದೃಢಪಟ್ಟಿಲ್ಲ’ ಎಂದು ಪರಮ್ ವೀರ್‌ ಸಿಂಗ್ ಹೇಳಿದರು.

‘ಹಸಿರು ಫಂಗಸ್ ಕೂಡಾ ಕಪ್ಪು ಫಂಗಸ್‌ನಂತಹ ಲಕ್ಷಣವನ್ನೇ ಹೊಂದಿದೆ. ಇದರಿಂದ ನಾವು ಆತಂಕ್ಕೆ ಒಳಗಾಗುವ ಅಗತ್ಯವಿಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು‘ ಎಂದು ಅವರು ಹೇಳಿದ್ದಾರೆ.

ಜೂನ್‌ 14ರಂದು ಮಧ್ಯಪ್ರದೇಶದ ಇಂಧೋರ್‌ನಲ್ಲಿ ಕೋವಿಡ್‌ ಸೋಂಕಿತ 34 ವರ್ಷದ ವ್ಯಕ್ತಿಯೊಬ್ಬರಲ್ಲಿ ಹಸಿರು ಫಂಗಸ್ ಕಾಣಿಸಿಕೊಂಡಿತ್ತು. ಅವರ ಆರೋಗ್ಯ ತೀವ್ರವಾಗಿ ಬಿಗಡಾಯಿಸಿದ್ದರಿಂದ ಅವರನ್ನು ತುರ್ತಾಗಿ ವಿಮಾನದಲ್ಲಿ ಕರೆದೊಯ್ದು ಮುಂಬೈಯ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಯಿತು.

ದೇಶದಲ್ಲಿ ಕೊರೊನಾ ಎರಡನೇ ಅಲೆ ಕಾಣಿಸಿಕೊಂಡ ನಂತರ ವಿವಿಧ ರಾಜ್ಯಗಳಲ್ಲಿ ಹಲವಾರು ರೋಗಿಗಳಿಗೆ ಕಪ್ಪು, ಹಳದಿ, ಬಿಳಿ ಫಂಗಸ್‌ ಸೋಂಕು ತಗುಲಿದೆ. ಹಲವಾರು ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.