ADVERTISEMENT

ರೈತರ ಭೇಟಿ: ವಿರೋಧ ಪಕ್ಷಗಳ ಸಂಸದರಿಗೆ ಪೊಲೀಸರ ತಡೆ–ಹರ್‌ಸಿಮ್ರತ್‌ ಕೌರ್ ಬಾದಲ್

ಶಿರೋಮಣಿ ಅಕಾಲಿದಳದ ಸಂಸದೆ ಹರ್‌ಸಿಮ್ರತ್‌ ಕೌರ್ ಬಾದಲ್

ಪಿಟಿಐ
Published 4 ಫೆಬ್ರುವರಿ 2021, 6:58 IST
Last Updated 4 ಫೆಬ್ರುವರಿ 2021, 6:58 IST
ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭೇಟಿಯಾಗಲು ಬುಧವಾರ ಗಾಜಿಪುರದತ್ತ ಹೊರಟ ವಿರೋಧ ಪಕ್ಷಗಳ ಸಂಸದರ ನಿಯೋಗ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭೇಟಿಯಾಗಲು ಬುಧವಾರ ಗಾಜಿಪುರದತ್ತ ಹೊರಟ ವಿರೋಧ ಪಕ್ಷಗಳ ಸಂಸದರ ನಿಯೋಗ.   

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಭೇಟಿಗಾಗಿ ಗಾಜಿಪುರ ಗಡಿಯತ್ತ ತೆರಳುತ್ತಿದ್ದ ಹತ್ತು ವಿರೋಧ ಪಕ್ಷಗಳ ಹದಿನೈದು ಸಂಸದರನ್ನು ಪೊಲೀಸರು ತಡೆದಿದ್ದಾರೆ.

ಶಿರೋಮಣಿ ಅಕಾಲಿದಳದ(ಎಸ್‌ಎಡಿ) ಸಂಸದೆ ಹರ್‌ಸಿಮ್ರತ್‌ ಕೌರ್ ಬಾದಲ್ ಪ್ರಕಾರ, ‘ಪ್ರತಿಭಟನಾ ಸ್ಥಳದ ಸುತ್ತ ಹಾಕಿರುವ ಬ್ಯಾರಿಕೇಡ್‌ಗಳನ್ನು ದಾಟಲು ಪ್ರಯತ್ನಿಸುತ್ತಿದ್ದ ಎಸ್‌ಎಡಿ, ಡಿಎಂಕೆ, ಎನ್‌ಸಿಪಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದರೂ ಸೇರಿದಂತೆ ಹದಿನೈದು ಮಂದಿ ಸಂಸದರನ್ನು ಪೊಲೀಸರು ತಡೆದಿದ್ದಾರೆ.

ಈ ಸಂಸದರ ತಂಡದಲ್ಲಿ ಪ್ರಮುಖವಾಗಿ ಎಸ್‌ಎಡಿ ಪಕ್ಷದಿಂದ ಹರ್‌ಸಿಮ್ರತ್‌ ಕೌರ್ ಬಾದಲ್‌, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ, ಡಿಎಂಕೆ ಪಕ್ಷದ ಕನಿಮೋಳಿ ಮತ್ತು ತಿರುಚಿ ಸಿವಾ, ಟಿಎಂಸಿಯ ಸಂಸದ ಸುಗತ ರಾಯ್‌ ಇದ್ದಾರೆ. ಇವರೊಂದಿಗೆ ನ್ಯಾಷನಲ್‌ ಕಾನ್ಫೆರನ್ಸ್‌ ಸದಸ್ಯರು, ಆರ್‌ಎಸ್‌ಪಿ ಮತ್ತು ಐಯುಎಂಎಲ್‌ ಸಂಸದರು ಈ ತಂಡದ ಜೊತೆಗಿದ್ದಾರೆ.

ADVERTISEMENT

ಬುಧವಾರ ಸಂಸತ್ತಿನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ಹಲವು ವಿರೋಧ ಪಕ್ಷಗಳ ಸದಸ್ಯರು, ‘ಪ್ರತಿಷ್ಠೆಯ ವಿಷಯವಾಗಿಸದೇ ಕೃಷಿ ಕಾಯ್ದೆಗಳನ್ನು ಸರ್ಕಾರ ಹಿಂಪಡೆಯಬೇಕು. ಪ್ರತಿಭಟನೆ ನಡೆಸುತ್ತಿರುವ ರೈತರನ್ನು ‘ಶತ್ರುಗಳೆಂದು‘ ಕಾಣಬಾರದು‘ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.