ADVERTISEMENT

ಜಿಎಸ್‌ಟಿ: ವಿನಾಯ್ತಿ ಮಿತಿ ದುಪ್ಪಟ್ಟು

ಎಂಎಸ್‌ಎಂಇ ವಲಯಕ್ಕೆ ಹೆಚ್ಚು ಪ್ರಯೋಜನ: ಜೇಟ್ಲಿ

ಪಿಟಿಐ
Published 10 ಜನವರಿ 2019, 20:33 IST
Last Updated 10 ಜನವರಿ 2019, 20:33 IST
ಅರುಣ್‌ ಜೇಟ್ಲಿ
ಅರುಣ್‌ ಜೇಟ್ಲಿ   

ನವದೆಹಲಿ: ಸಣ್ಣ ಪ್ರಮಾಣದಲ್ಲಿ ವಹಿವಾಟು ನಡೆಸುವವರಿಗೆ ಪರಿಹಾರ ನೀಡಲು ಜಿಎಸ್‌ಟಿ ಮಂಡಳಿಯು ತೆರಿಗೆ ವಿನಾಯ್ತಿ ಮಿತಿಯನ್ನು ದುಪ್ಪಟ್ಟುಗೊಳಿಸಿದ್ದು, ರಾಜಿ ತೆರಿಗೆ ವ್ಯವಸ್ಥೆಗೆ ಸೇರ್ಪಡೆಗೊಳ್ಳಲು ನಿಗದಿ ಮಾಡಿದ್ದ ವಹಿವಾಟಿನ ಗರಿಷ್ಠ ಮಿತಿಯನ್ನೂ ಹೆಚ್ಚಿಸಿದೆ.

‘ಜಿಎಸ್‌ಟಿಗೆ ನೋಂದಣಿ ಮಾಡಿಕೊಳ್ಳುವವರ ವಾರ್ಷಿಕ ವಹಿವಾಟಿನ ವಿನಾಯ್ತಿ ಮಿತಿಯನ್ನು ಸದ್ಯದ ₹ 20 ಲಕ್ಷದಿಂದ ₹ 40 ಲಕ್ಷಕ್ಕೆ ಏರಿಸಲಾಗಿದೆ. ವರ್ಷಕ್ಕೆ ₹ 40 ಲಕ್ಷ ವಹಿವಾಟು ನಡೆಸುವವರು ಜಿಎಸ್‌ಟಿ ಪಾವತಿಸುವ ಅಗತ್ಯ ಇಲ್ಲ. ಎಲ್ಲ ರಾಜ್ಯಗಳು ಇದನ್ನು ಜಾರಿಗೆ ತಂದರೆ ಇದರಿಂದ ವಾರ್ಷಿಕ ₹ 5,200 ಕೋಟಿ ವರಮಾನ ನಷ್ಟವಾಗಲಿದೆ. ಈಶಾನ್ಯ ರಾಜ್ಯಗಳಿಗೆ ಈ ಮಿತಿ ₹ 20 ಲಕ್ಷಕ್ಕೆ ನಿಗದಿಪಡಿಸಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದರಿಂದ ಶೇ 60ರಷ್ಟು ನೋಂದಾಯಿತ ವಹಿವಾಟುದಾರರು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಉಳಿಯಲಿದ್ದಾರೆ. ತೆರಿಗೆ ವರಮಾನ ಸಂಗ್ರಹದ ಮೇಲೆ ಇದು ತುಂಬ ಕಡಿಮೆ ಪರಿಣಾಮ ಬೀರಲಿದೆ.

ADVERTISEMENT

**

ಶೇ 1 ವಿಪತ್ತು ತೆರಿಗೆಗೆ ಅನುಮತಿ
ಅತಿವೃಷ್ಟಿಯಿಂದ ತೀವ್ರವಾಗಿ ನಲುಗಿರುವ ಕೇರಳವು ರಾಜ್ಯದ ಒಳಗಿನ ಮಾರಾಟಕ್ಕೆ ಎರಡು ವರ್ಷಗಳವರೆಗೆ ಶೇ 1ರಷ್ಟು ವಿಪತ್ತು ಸೆಸ್‌ ವಿಧಿಸುವುದಕ್ಕೆ ಮಂಡಳಿಯು ಅನುಮತಿ ನೀಡಿದೆ.

ಸಚಿವರ ಸಮಿತಿ ರಚನೆ: ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ರಿಯಲ್‌ ಎಸ್ಟೇಟ್‌ ಮತ್ತು ಲಾಟರಿಗಳನ್ನು ಸೇರ್ಪಡೆ ಮಾಡುವ ಬಗ್ಗೆ ನಿರ್ಧಾರಕ್ಕೆ ಬರಲು ಮಂಡಳಿಯು ಏಳು ಸದಸ್ಯರ ಸಮಿತಿ ರಚಿಸಿದೆ.

ಈ ವಿಷಯದ ಬಗ್ಗೆ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ವಿವಿಧ ರಾಜ್ಯಗಳ ಹಣಕಾಸು ಸಚಿವರಲ್ಲಿ ಭಿನ್ನಾಭಿಪ್ರಾಯ ಕಂಡು ಬಂದಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.