ಮಧುರೈ: ಸೆಪ್ಟೆಂಬರ್ 22ರಿಂದ ಜಾರಿಗೆ ಬರುವ ಪರಿಷ್ಕೃತ ಜಿಎಸ್‌ಟಿ ದರದಿಂದಾಗಿ ಜನರ ಬಳಿಯಲ್ಲಿ ₹ 2 ಲಕ್ಷ ಕೋಟಿ ಉಳಿಯುತ್ತದೆ, ಇದು ದೇಶಿಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ತಮಿಳುನಾಡು ಆಹಾರ ಧಾನ್ಯ ವ್ಯಾಪಾರಿಗಳ ಸಂಘದ 80ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದ್ದಾರೆ.
‘ಪ್ರಸ್ತಾವಿತ ಜಿಎಸ್‌ಟಿ ಸುಧಾರಣೆಗಳೊಂದಿಗೆ, ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳವಾಗುತ್ತದೆ. ಹಣಕಾಸು ಸಚಿವಾಲಯವು ಸಾರ್ವಜನಿಕರಿಂದ ₹ 2 ಲಕ್ಷ ಕೋಟಿನ್ನು ತೆರಿಗೆಯಾಗಿ ಸ್ವೀಕರಿಸುವುದಿಲ್ಲ. ಆದರೆ ಅದು ದೇಶಿಯ ಬೇಡಿಕೆ ಹೆಚ್ಚಾಗಿ ಮತ್ತೆ ಆರ್ಥಿಕತೆಗೆ ಮರಳುತ್ತದೆ’ ಎಂದು ಹೇಳಿದ್ದಾರೆ.
‘ಉದಾಹರಣೆಗೆ ನೀವು ಸಾಬೂನನ್ನು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡಿದರೆ, ತಯಾರಕರು ಉತ್ಪಾದನೆಯನ್ನು ಹೆಚ್ಚಿಸುತ್ತಾರೆ. ಉತ್ಪಾದನೆಯನ್ನು ಹೆಚ್ಚಿಸಲು, ಅವರು ಹೆಚ್ಚು ಜನರನ್ನು ನೇಮಿಸಿಕೊಳ್ಳುತ್ತಾರೆ. ಜನರು ಹೆಚ್ಚಾದಾಗ ಅವರು ಆದಾಯಕ್ಕೆ ತೆರಿಗೆ ಪಾವತಿಸುತ್ತಾರೆ. ಪರೋಕ್ಷ ತೆರಿಗೆಗಳ ಮೂಲಕ ಸರ್ಕಾರಕ್ಕೆ ಆದಾಯ ಬರುತ್ತದೆ. ಈ ಚಕ್ರವು ನಿರಂತರವಾಗಿ ನಡೆಯುತ್ತಿರುತ್ತದೆ. ಇದು ಆರ್ಥಿಕತೆಗೆ ಒಳ್ಳೆಯದು’ ಎಂದು ಅವರು ಹೇಳಿದ್ದಾರೆ.
ಸರಳವಾಗಿ ಹೇಳುವುದಾದರೆ, ಸಾರ್ವಜನಿಕರು ಖರ್ಚು ಹೆಚ್ಚು ಮಾಡಿದಷ್ಟು, ಹೆಚ್ಚಿನ ಬೇಡಿಕೆ ಇರುತ್ತದೆ. ಬೇಡಿಕೆಯನ್ನು ಪೂರೈಸಲು ಹೆಚ್ಚಿನ ಉತ್ಪಾದನೆ ಇದ್ದಾಗ, ಹೆಚ್ಚಿನ ಉದ್ಯೋಗಗಳು ಇರುತ್ತವೆ, ಹೆಚ್ಚಿನ ಉದ್ಯೋಗಗಳು ಇದ್ದಾಗ, ತೆರಿಗೆ ಸಂಗ್ರಹ ಹೆಚ್ಚಳವಾಗುತ್ತವೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.