ADVERTISEMENT

ಡಿಜಿಟಲ್‌ ಕಂಟೆಂಟ್‌ ನಿಯಂತ್ರಣಕ್ಕೆ ಸ್ವಾಯತ್ತ ಪ್ರಾಧಿಕಾರ ಅಗತ್ಯ:ಸುಪ್ರೀಂ ಕೋರ್ಟ್

‘ಇಂಡಿಯಾಸ್‌ ಗಾಟ್‌ ಲ್ಯಾಟೆಂಟ್‌’ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 16:16 IST
Last Updated 27 ನವೆಂಬರ್ 2025, 16:16 IST
...
...   

ನವದೆಹಲಿ: ಡಿಜಿಟಲ್‌ ಕಂಟೆಂಟ್‌ಗಳ ಪ್ರಸಾರಕ್ಕೆ ಸಂಬಂಧಿಸಿದಂತೆ ಕಂಟೆಂಟ್‌ ಕ್ರಿಯೇಟರ್‌ಗಳು ಹಾಗೂ ಸಂಬಂಧಪಟ್ಟ ಡಿಜಿಟಲ್‌ ವೇದಿಕೆಗಳನ್ನೇ ಹೊಣೆಯಾಗಿಸಲು ಪ್ರತ್ಯೇಕ ಸ್ವಾಯತ್ತ ಸಂಸ್ಥೆ ಹಾಗೂ ಪ್ರಾಧಿಕಾರ ರಚಿಸಬೇಕಾದ ಅಗತ್ಯವನ್ನು ಸುಪ್ರೀಂ ಕೋರ್ಟ್‌ ಗುರುವಾರ ಪ್ರತಿಪಾದಿಸಿದೆ. 

ಅಭಿವ್ಯಕ್ತಿ ಸ್ವಾತಂತ್ರ್ಯ–ಸಮಾಜದ ಹಿತದೃಷ್ಟಿ, ಮಕ್ಕಳ ರಕ್ಷಣೆಯ ನಡುವಿನ ಸಮತೋಲನ ಕಾಯ್ದುಕೊಳ್ಳಲು ಇಂಥ ಸ್ವಾಯತ್ತ ಸಂಸ್ಥೆಯನ್ನು ರೂಪಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠ ಹೇಳಿದೆ.

ಕಂಟೆಂಟ್ ಕ್ರಿಯೇಟರ್‌ ಸಮಯ್‌ ರೈನಾ ಅವರ ‘ಇಂಡಿಯಾಸ್‌ ಗಾಟ್‌ ಲ್ಯಾಟೆಂಟ್‌’ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಿದ ಅಶ್ಲೀಲ ಕಂಟೆಂಟ್‌ಗೆ ಸಂಬಂಧಿಸಿದಂತೆ ಪಾಡ್‌ಕಾಸ್ಟರ್‌ ರಣವೀರ್‌ ಅಲಹಾಬಾದಿಯಾ ಹಾಗೂ ಇತರರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿದೆ.

ADVERTISEMENT

ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಅಟಾರ್ನಿ ಜನರಲ್‌ ಆರ್.ವೆಂಕಟರಮಣಿ ಹಾಗೂ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಡಿಜಿಟಲ್‌ ವೇದಿಕೆಗಳ ವಸ್ತುವಿಷಯ ಕಡಿವಾಣಕ್ಕೆ ಹೊಸ ಮಾರ್ಗಸೂಚಿ ರೂಪಿಸಲಾಗಿದ್ದು, ಅದರ ಜಾರಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸುತ್ತಿರುವುದಾಗಿ ನ್ಯಾಯಪೀಠಕ್ಕೆ ತಿಳಿಸಿದರು.

ಈ ವೇಳೆ, ‘ದೇಶವಿರೋಧಿ ವಿಚಾರವೂ ಸೇರಿದಂತೆ ಯಾವುದೇ ರೀತಿಯ ಅಶ್ಲೀಲ ವಿಚಾರವನ್ನು ಒಂದು ಬಾರಿ ಡಿಜಿಟಲ್‌ ವೇದಿಕೆಗೆ ಅಪ್‌ಲೋಡ್ ಮಾಡಿದರೆ ಅದು ವೇಗವಾಗಿ ಹರಿದಾಡುತ್ತದೆ. ಈ ಸ್ವರೂಪದ ವಸ್ತುವಿಷಯಗಳ ಮೇಲ್ವಿಚಾರಣೆ, ನಿಗ್ರಹಕ್ಕೆ ಪ್ರತ್ಯೇಕ ಸ್ವಾಯತ್ತ ಸಂಸ್ಥೆ ಅಥವಾ ಪ್ರಾಧಿಕಾರ ಇರಬೇಕು. ಅದು ಯಾವುದೇ ಆನ್‌ಲೈನ್‌ ವೇದಿಕೆ ಬಳಕೆದಾರರು ಹಾಗೂ ರಾಜ್ಯ ಆಡಳಿತದ ಪ್ರಭಾವದಿಂದ ಮುಕ್ತವಾಗಿರಬೇಕು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. 

ಜತೆಗೆ ಅಶ್ಲೀಲ ವಿಚಾರಕ್ಕೆ ಸಂಬಂಧಿಸಿದ ಕಂಟೆಂಟ್‌ಗಳನ್ನು ವೀಕ್ಷಿಸಲು ವಿಧಿಸಿರುವ ಬಳಕೆದಾರನ ವಯಸ್ಸಿನ ಮಿತಿಯನ್ನು ಖಾತರಿಪಡಿಸಿಕೊಳ್ಳಲು ಆಧಾರ್ ಕಾರ್ಡ್‌ ದೃಢೀಕರಣವನ್ನು ನಿಗದಿಪಡಿಸುವುದು ಸೂಕ್ತ ಎಂಬ ಸಲಹೆಯನ್ನೂ ನ್ಯಾಯಪೀಠ ನೀಡಿದೆ. 

Cut-off box - ‘ಅಂಗವಿಕಲರ ಗೌರವ ರಕ್ಷಣೆಗೆ ಕಾನೂನು ರಚಿಸಿ’ ಪರಿಶಿಷ್ಟ ಜಾತಿ ಹಾಗೂ ಪರಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆಗೆ ಕಾಯ್ದೆ ಇರುವಂತೆಯೇ ಅಂಗವಿಕಲರ ಗೌರವ–ಘನತೆಯನ್ನೂ ಕಾಪಾಡುವ ನಿಟ್ಟಿನಲ್ಲಿ ಕಠಿಣ ಕಾನೂನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸಲಹೆ ನೀಡಿದೆ.  ಕಾರ್ಯಕ್ರಮವೊಂದರಲ್ಲಿ ಕೆಲವು ಹಾಸ್ಯನಟರು ಅಂಗವಿಕಲ ವ್ಯಕ್ತಿಯೊಬ್ಬರನ್ನು ಅಪಹಾಸ್ಯ ಮಾಡಿದ್ದ ವಿಡಿಯೊ ಜಾಲತಾಣಗಳಲ್ಲಿ ಹರಿದಾಡಿತ್ತು. ಇದರಿಂದ ವ್ಯಕ್ತಿಯ ಘನತೆ ಹಾಗೂ ಜೀವಿಸುವ ಹಕ್ಕಿಗೆ ಚ್ಯುತಿ ತರಲಾಗಿದೆ ಎಂದು ಆರೋಪಿಸಿ ಕ್ಯೂರ್‌ ಎಸ್‌ಎಂಎ ಫೌಂಡೇಷನ್‌ ಸಂಸ್ಥೆಯು ರಿಟ್‌ ಅರ್ಜಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಅಂಗವಿಕಲರಾಗಿದ್ದರೂ ಹಲವು ಸಾಧನೆಗೈದಿರುವಂತಹ ವ್ಯಕ್ತಿಗಳನ್ನು ಕರೆದು ಆತಿಥ್ಯ ವಹಿಸಿ ಅವರ ಆದರ್ಶಪ್ರಾಯ ಜೀವನದ ಬಗ್ಗೆ ತಿಂಗಳಲ್ಲಿ ಎರಡು ಕಾರ್ಯಕ್ರಮಗಳನ್ನಾದರೂ ಪ್ರದರ್ಶಿಸುವಂತೆ ಕಂಟೆಂಟ್ ಕ್ರಿಯೇಟರ್‌ ಸಮಯ್‌ ರೈನಾ ಹಾಗೂ ಇತರೆ ಕೆಲವು ಹಾಸ್ಯ ನಟರಿಗೆ ಸೂಚಿಸಿದೆ. ಇಂಥ ಕಾರ್ಯಕ್ರಮಗಳ ಮೂಲಕ ಅಂಗವಿಕಲರ ಚಿಕಿತ್ಸೆಗೆ ನಿಧಿ ಸಂಗ್ರಹಿಸುವ ಸಲಹೆಯನ್ನೂ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.