ಗಾಂಧಿನಗರ, ಗುಜರಾತ್: ಶಾಸಕರು, ಸಚಿವರು, ಸ್ಪೀಕರ್, ಡೆಪ್ಯುಟಿ ಸ್ಪೀಕರ್ ಮತ್ತು ಪ್ರತಿಪಕ್ಷ ನಾಯಕರ ವೇತನ ಏರಿಕೆ ಮಸೂದೆಗೆ ಗುಜರಾತ್ ವಿಧಾನಸಭೆ ಅನುಮೋದನೆ ನೀಡಿದ್ದು, ಸರಿಸುಮಾರು ₹45,000 ಏರಿಕೆಯಾಗಿದೆ.
ಶಾಸಕರ ವೇತನ ₹70,727ರಿಂದ ₹1.16 ಲಕ್ಷಕ್ಕೆ (64%) ಹೆಚ್ಚಿದೆ. ಸಚಿವರು,ಸ್ಪೀಕರ್, ಡೆಪ್ಯುಟಿ ಸ್ಪೀಕರ್ ಮತ್ತು ಪ್ರತಿಪಕ್ಷ ನಾಯಕರ ವೇತನ ಈಗಿರುವ ₹86 ಸಾವಿರದಿಂದ 1.32 ಲಕ್ಷಕ್ಕೆ (54%) ಏರಿದೆ.
ಪರಿಷ್ಕೃತ ವೇತನ ಫೆಬ್ರುವರಿ 2017ರಿಂದ ಪೂರ್ವಾನ್ವಯವಾಗಲಿದ್ದು, ಬಾಕಿ (ಅರಿಯರ್ಸ್) ಪಾವತಿಗೆ ₹6 ಕೋಟಿ ವೆಚ್ಚವಾಗಲಿದೆ. ಪ್ರತಿ ವರ್ಷ ಸರ್ಕಾರದ ಬೊಕ್ಕಸಕ್ಕೆ ₹10 ಕೋಟಿ ಹೊರೆ ಬೀಳಲಿದೆ.
ಸಂಸದೀಯ ವ್ಯವಹಾರ ಸಚಿವ ಪ್ರದೀಪ್‌ಸಿನ್ಹಾ ಜಡೇಜಾ ಅವರು ಮಂಡಿಸಿದ ತಿದ್ದುಪಡಿ ಮಸೂದೆಗೆ ಸರ್ವಾನುಮತದ ಅನುಮೋದನೆ ದೊರೆಯಿತು.
====
ಏರಿಕೆ ಸಮರ್ಥನೆ
182 ಸದಸ್ಯಬಲದ ಗುಜರಾತ್ ವಿಧಾನಸಭೆಯ ಶಾಸಕರ ವೇತನ 2005ರಿಂದ ಏರಿಕೆಯಾಗಿರಲಿಲ್ಲ ಎಂದು ಸಚಿವ ಪ್ರದೀಪ್‌ಸಿನ್ಹಾ ಜಡೇಜಾ ಹೇಳಿದ್ದಾರೆ. ಇತರೆ ರಾಜ್ಯಗಳ ಜನಪ್ರತಿನಿಧಿಗಳ ವೇತನಕ್ಕೆ ಹೋಲಿಸಿದರೆ, ತಮ್ಮ ರಾಜ್ಯದ ಶಾಸಕರ ವೇತನ ಕಡಿಮೆಯಿದೆ ಎಂದು ಅವರು ವೇತನ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹಿಂದಿನ ವೇತನ ವ್ಯವಸ್ಥೆಯು ಅಧೀನ ಕಾರ್ಯದರ್ಶಿಯ ಮೂಲವೇತನವನ್ನು ಮಾನದಂಡವನ್ನಾಗಿ ಇಟ್ಟುಕೊಂಡು ನಿಗದಿಯಾಗುತ್ತಿತ್ತು. ಇನ್ನುಮುಂದೆ ಹೆಚ್ಚುವರಿ ಕಾರ್ಯದರ್ಶಿಯ ಮೂಲವೇತನ ಮಾನದಂಡವಾಗಲಿದೆ ಎಂದು ಸಚಿವರು ಹೇಳಿದ್ದಾರೆ.
===
ರಾಜ್ಯ ಶಾಸಕರ ವೇತನ
ಉತ್ತರಾಖಂಡ ₹2.91 ಲಕ್ಷ
ತೆಲಂಗಾಣ ₹2.50ಲಕ್ಷ
ಜಾರ್ಖಂಡ್ ₹2.25ಲಕ್ಷ
ಮಹಾರಾಷ್ಟ್ರ ₹2.13ಲಕ್ಷ
ಬಿಹಾರ,ಪಶ್ಚಿಮ ಬಂಗಾಳ,ತಮಿಳುನಾಡು,ಒಡಿಶಾ ₹1 ಲಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.