ADVERTISEMENT

ಗುಜರಾತ್ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವ ವ್ಯಾಸ್

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 18:38 IST
Last Updated 28 ನವೆಂಬರ್ 2022, 18:38 IST
ಮಾಜಿ ಸಚಿವ ಜಯನಾರಾಯಣ ವ್ಯಾಸ್ ಕಾಂಗ್ರೆಸ್‌ ಸೇರ್ಪಡೆಯಾದರು. ಮಲ್ಲಿಕಾರ್ಜುನ ಖರ್ಗೆ, ಅಶೋಕ್ ಗೆಹಲೋತ್ ಇದ್ದರು –ಪಿಟಿಐ ಚಿತ್ರ
ಮಾಜಿ ಸಚಿವ ಜಯನಾರಾಯಣ ವ್ಯಾಸ್ ಕಾಂಗ್ರೆಸ್‌ ಸೇರ್ಪಡೆಯಾದರು. ಮಲ್ಲಿಕಾರ್ಜುನ ಖರ್ಗೆ, ಅಶೋಕ್ ಗೆಹಲೋತ್ ಇದ್ದರು –ಪಿಟಿಐ ಚಿತ್ರ   

ಅಹಮದಾಬಾದ್: ಗುಜರಾತ್‌ನ ಮಾಜಿ ಸಚಿವ ಜಯನಾರಾಯಣ ವ್ಯಾಸ್ ಅವರು ಸೋಮವಾರ ಕಾಂಗ್ರೆಸ್ ಸೇರ್ಪಡೆಯಾದರು. ಇತ್ತೀಚೆಗೆ ಬಿಜೆಪಿಗೆ ರಾಜೀನಾಮೆ ನೀಡಿದ್ದ ಅವರು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ವ್ಯಾಸ್ ಅವರ ಮಗ ಸಮೀರ್ ವ್ಯಾಸ್‌ ಸಹ ಕಾಂಗ್ರೆಸ್ ಸೇರಿದರು.

ಬಿಜೆಪಿ ಜೊತೆಗಿನ ಮೂರು ದಶಕಗಳ ಸಂಬಂಧವನ್ನು ಕಡಿದು ಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಅಲ್ಲಿ ದೊಡ್ಡ ಆಲದ ಮರವೊಂದು ಬೆಳೆಯುತ್ತಲೇ ಇದೆ. ಆಲದ ಮರದ ಕೆಳಗೆ ಯಾವುದೂ ಬೆಳೆಯುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ಉತ್ತರಿಸಿದ್ದಾರೆ.

ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವ್ಯಾಸ್ ಅವರು ಸುದ್ದಿವಾಹಿನಿಗಳ ಚರ್ಚೆಯಲ್ಲಿ ಪಕ್ಷವನ್ನು ಪ್ರತಿನಿಧಿಸುತ್ತಿದ್ದರು. 2007ರಿಂದ 2012ರವರೆಗೆ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. 2012 ಮತ್ತು 2017ರ ಚುನಾವಣೆಗಳಲ್ಲಿ ಅವರು ಸೋತಿದ್ದರು.

ADVERTISEMENT

ರಾಹುಲ್ ಗಾಂಧಿ ಅವರನ್ನು ಹಾಗೂ ಕಾಂಗ್ರೆಸ್‌ನ ಆಂತರಿಕ ಪ್ರಜಾಪ್ರಭುತ್ವವನ್ನು ವ್ಯಾಸ್ ಪ್ರಶಂಸಿಸಿದ್ದಾರೆ. ‘ಗುಜರಾತ್‌ನಲ್ಲಿ ಪದೇ ಪದೇ ಮುಖ್ಯಮಂತ್ರಿಗಳನ್ನು ಬದಲಿಸಲಾಯಿತು. 2021ರಲ್ಲಿ ಇಡೀ ಸಚಿವ ಸಂಪುಟವೇ ಹೊಸದಾಗಿತ್ತು. ತಮ್ಮನ್ನು ಸಂಪುಟದಿಂದ ತೆಗೆದರೂ ಸಚಿವರು ಪ್ರಶ್ನಿಸುವುದಿಲ್ಲ. ಈ ಎಲ್ಲ ಬದಲಾವಣೆಗಳು ರಾಜ್ಯದ ಹಿತಕ್ಕಾಗಿ ಮಾಡಿದವಲ್ಲ’ ಎಂದು ವ್ಯಾಸ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.