
ಬಂಧನ
(ಪ್ರಾತಿನಿಧಿಕ ಚಿತ್ರ)
ಅಹಮದಾಬಾದ್: ನಿಷೇಧಿತ ಭಯೋತ್ಪಾದಕ ಸಂಘಟನೆ ಅಲ್ ಖೈದಾ– ಭಾರತೀಯ ಉಪಖಂಡದ (ಎಕ್ಯೂಐಎಸ್) ಜತೆಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ನಾಲ್ಕು ಮಂದಿಯನ್ನು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.
ಬಂಧಿತರನ್ನು ದೆಹಲಿಯ ನಿವಾಸಿ ಮೊಹಮ್ಮದ್ ಫೈಕ್, ಅಹಮದಾಬಾದ್ ನಿವಾಸಿ ಮೊಹಮ್ಮದ್ ಫದ್ರೀನ್, ಗುಜರಾತ್‌ನ ಮೊಡಾಸ ಜಿಲ್ಲೆಯ ನಿವಾಸಿ ಸೈಫುಲ್ಲಾ ಖುರೇಷಿ, ನೊಯಿಡಾದ ನಿವಾಸಿ ಝೀಶಾನ್ ಅಲಿ ಎಂದು ಗುರುತಿಸಲಾಗಿದೆ.
ಭಾರತೀಯ ಆಡಳಿತ ಸಂಸ್ಥೆಗಳ ವಿರುದ್ಧ ಜನರನ್ನು ಪ್ರಚೋದಿಸುವ, ಹಿಂಸಾಚಾರಕ್ಕೆ ಕರೆ ನೀಡುವಂಥ ಮಾಹಿತಿ ಸಿದ್ಧಪಡಿಸಿ ಅವುಗಳನ್ನು ಇನ್‌ಸ್ಟಾಗ್ರಾಂನಲ್ಲಿ ಆರೋಪಿಗಳು ಹರಿಬಿಡುತ್ತಿದ್ದರು. ಜಿಹಾದಿ ಉದ್ದೇಶವಿರುವಂಥ, ಹಿಂಸಾತ್ಮಕ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಆರೋಪಿಗಳು ಇನ್‌ಸ್ಟಾಗ್ರಾಂನ ಐದು ಖಾತೆಗಳ ಮೂಲಕ ಅಲ್–ಖೈದಾದ ಪ್ರಚೋದನಾಕಾರಿ ವಿಡಿಯೊಗಳನ್ನು ಹರಿಬಿಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರು. ಭಾರತ ನಡೆಸಿದ ಆಪರೇಷನ್ ಸಿಂಧೂರದ ವಿರುದ್ಧ ವದಂತಿ ಹಬ್ಬಿಸಲು ಹಾಗೂ ಭಾರತ ಸರ್ಕಾರವನ್ನು ಗುರಿಯಾಗಿಸಿ ಅಪಪ್ರಚಾರಕ್ಕೆ ಸಂಚು ನಡೆಸಿರುವುದು ಆರೋಪಿಗಳು ನೀಡಿದ ಮಾಹಿತಿಯಿಂದ ತಿಳಿದುಬಂದಿದೆ’ ಎಂದೂ ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.