
ಅಹಮದಾಬಾದ್: ದಕ್ಷಿಣ ಭಾರತವನ್ನು ದೇಶದಿಂದ ಪ್ರತ್ಯೇಕಿಸುವ ಸಲುವಾಗಿ ‘ರಿಸಿನ್ ಭಯೋತ್ಪಾದಕ ದಾಳಿ’ಗೆ ಸಂಚು ರೂಪಿಸಿದ್ದ ಆರೋಪದಡಿ, ಹೈದರಾಬಾದ್ ನಿವಾಸಿ ಅಹ್ಮದ್ ಮೊಹಿಯುದ್ದೀನ್ ಸೈಯದ್ ಎಂಬಾತನನ್ನು ಗುಜರಾತ್ ಎಟಿಎಸ್ ಪೊಲೀಸರು ಬಂಧಿಸಿದ್ದಾರೆ.
ರಿಸಿನ್(ಹರಳೆಣ್ಣೆ ಬೀಜಗಳಿಂದ ತೆಗೆದ ವಿಷಕಾರಿ ವಸ್ತು) ಹಾಗೂ ಅಸಿಟೋನ್ ಮಿಶ್ರಣ ಮಾಡಿ ವಿಷಕಾರಿ ಪದಾರ್ಥ ತಯಾರಿಸಿ, ಅದನ್ನು ಬಳಸಿ ‘ನಾಸ್ತಿಕ’ರನ್ನು ಹತ್ಯೆ ಮಾಡಲು ಅಹ್ಮದ್ ಮೊಹಿಯುದ್ದೀನ್ ಸೈಯದ್ ಸಂಚು ರೂಪಿಸಿದ್ದ ಎಂದು ಗುಜರಾತ್ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಚೀನಾದಲ್ಲಿ ವೈದ್ಯಕೀಯ ಪದವಿ ಪಡೆದಿದ್ದರೂ, ಭಾರತೀಯ ವೈದ್ಯಕೀಯ ಪರಿಷತ್ತು(ಎಂಸಿಐ) ನಡೆಸುವ ಪರೀಕ್ಷೆಯನ್ನು ಅಹ್ಮದ್ ತೇರ್ಗಡೆಯಾಗಿರಲಿಲ್ಲ ಎಂದೂ ಉಲ್ಲೇಖಿಸಲಾಗಿದೆ.
ವಿದೇಶದಲ್ಲಿ ವೈದ್ಯ ಪದವಿ ಪಡೆದವರು ಭಾರತದಲ್ಲಿ ವೈದ್ಯಕೀಯ ವೃತ್ತಿ ಕೈಗೊಳ್ಳಲು ಎಂಸಿಐ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ.
‘ದಕ್ಷಿಣ ಭಾರತವನ್ನು ಭಾರತದ ಉಳಿದ ಪ್ರದೇಶದಿಂದ ಬೇರ್ಪಡಿಸಬೇಕು. ಇದಕ್ಕಾಗಿ ತನಗೆ ಹಣ ಹಾಗೂ ಶಸ್ತ್ರಾಸ್ತ್ರಗಳ ಅಗತ್ಯ ಇದೆ ಎಂಬುದಾಗಿ ಐಎಸ್‌ಕೆಪಿ(ಇಸ್ಲಾಮಿಕ್ ಸ್ಟೇಟ್ ಖೋರಾಸನ್ ಪ್ರಾವಿನ್ಸ್) ನಾಯಕ, ಅಫ್ಗಾನಿಸ್ತಾನದ ಅಬು ಖದೀಜಾಗೆ ಅಹ್ಮದ್ ಹೇಳಿದ್ದ’ ಎಂದು ವಿವರಿಸಲಾಗಿದೆ.
‘ಅಹ್ಮದ್ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಮೆಡಿಕಲ್ ಕನ್ಸಲ್ಟಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಜೊತೆಗೆ ಆಹಾರ ಪದಾರ್ಥ ಮಾರಾಟವನ್ನೂ ಮಾಡುತ್ತಿದ್ದ. ದೇಶದಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಆರೋಪದ ಮೇಲೆ ಈ ಮೊದಲು ಉತ್ತರ ಪ್ರದೇಶ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ’ ಎಂದು ಎಟಿಎಸ್ ಹೇಳಿದೆ.
‘ರಿಸಿನ್ ವಿಷ ಮಿಶ್ರಣ ತಯಾರು ಮಾಡುವುದಕ್ಕಾಗಿ ಖದೀಜಾ ಸೂಚನೆಯಂತೆ ಅಹ್ಮದ್ ಹರಳೆಣ್ಣೆ ಬೀಜಗಳನ್ನು ಖರೀದಿಸಿ, ಅವುಗಳಿಂದ ವಿಷಕಾರಿ ಪದಾರ್ಥ ಹೊರತೆಗೆದು, ಅಸಿಟೋನ್‌ನೊಂದಿಗೆ ಮಿಶ್ರಣ ಮಾಡಿದ್ದ. ಗೂಗಲ್ ಹಾಗೂ ಚಾಟ್‌ಜಿಪಿಟಿ ಬಳಸಿ ಈ ಮಿಶ್ರಣ ತಯಾರಿಸುವ ವಿಧಾನ ಕಲಿತಿದ್ದ’ ಎಂದು ಎಟಿಎಸ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.