ADVERTISEMENT

ಬೌದ್ಧ ಮತವು ಪ್ರತ್ಯೇಕ ಧರ್ಮ: ಗುಜರಾತ್‌ ಸರ್ಕಾರದ ಅಧಿಸೂಚನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 15:17 IST
Last Updated 11 ಏಪ್ರಿಲ್ 2024, 15:17 IST
ಪ್ರಾತಿನಿಧಿಕ ಚಿತ್ರ– ಪಿಟಿಐ
ಪ್ರಾತಿನಿಧಿಕ ಚಿತ್ರ– ಪಿಟಿಐ   

ಅಹಮದಾಬಾದ್‌: ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2003ರ ಪ್ರಕಾರ, ಬೌದ್ಧ ಮತವನ್ನು ‘ಪ್ರತ್ಯೇಕ ಧರ್ಮ’ವೆಂದು ಪರಿಗಣಿಸಲಾಗಿದ್ದು, ಬೌದ್ಧ, ಸಿಖ್‌ ಮತ್ತು ಜೈನ್‌ ಧರ್ಮಕ್ಕೆ ಮತಾಂತರವಾಗುವ ಹಿಂದೂಗಳು ಜಿಲ್ಲಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.

ಈ ಸಂಬಂಧ ಗುಜರಾತ್‌ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದೆ. 

‘ಹಿಂದೂ ಧರ್ಮದಿಂದ ಬೌದ್ಧ, ಸಿಖ್ ಮತ್ತು ಜೈನ ಧರ್ಮಕ್ಕೆ ಮತಾಂತರಗೊಳ್ಳಲು ಅನುಮತಿ ನೀಡುವ ಕುರಿತು’ ಎಂಬ ಶೀರ್ಷಿಕೆಯಡಿ ಹೊರಡಿಸಿರುವ ಅಧಿಸೂಚನೆಯಲ್ಲಿ, ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ಅನುಮತಿ ನೀಡುವಾಗ ನಿಯಮ ಪಾಲಿಸದಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದೂ ತಿಳಿಸಲಾಗಿದೆ. 

ADVERTISEMENT

‘ಇದಲ್ಲದೆ, ಅನೇಕ ಸಂದರ್ಭಗಳಲ್ಲಿ ಅರ್ಜಿದಾರರು ಮತ್ತು ಸ್ವಾಯತ್ತ ಸಂಸ್ಥೆಗಳ ಪ್ರತಿನಿಧಿಗಳು, ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರವಾಗಲು ಪೂರ್ವಾನುಮತಿ ಅಗತ್ಯವಿಲ್ಲವೆಂದು ಪ್ರತಿಪಾದಿಸಿದ್ದಾರೆ. ಸಿಖ್, ಜೈನ ಮತ್ತು ಬೌದ್ಧ ಧರ್ಮಗಳನ್ನು ಹಿಂದೂ ಧರ್ಮದಲ್ಲಿ ಸೇರಿಸಲಾಗಿದೆ ಎಂದು ಸಂವಿಧಾನದ 25 (2)ನೇ ವಿಧಿಯನ್ನು ಉಲ್ಲೇಖಿಸಿ, ಪೂರ್ವಾನುಮತಿಯ ಅಗತ್ಯವಿಲ್ಲವೆಂದು ಸಂಬಂಧಪಟ್ಟ ಕಚೇರಿಗಳು ಅರ್ಜಿಗಳನ್ನು ವಿಲೇವಾರಿ ಮಾಡುತ್ತಿವೆ. ಧಾರ್ಮಿಕ ಮತಾಂತರದಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಕಾನೂನಿನ ನಿಬಂಧನೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ, ಈ ರೀತಿಯಾಗಿ ಪ್ರತಿಕ್ರಿಯಿಸುವುದು ಕಾನೂನು ಸಮರಗಳಿಗೆ ಕಾರಣವಾಗಬಹುದು. ಹಾಗಾಗಿ ಈ ಸ್ಪಷ್ಟೀಕರಣ ನೀಡಲಾಗಿದೆ’ ಎಂದು ‌ಅಧಿಸೂಚನೆಯಲ್ಲಿ ಹೇಳಿದೆ.

ಈ ಮೇಲಿನ ಕಾರಣಗಳನ್ನು ಉಲ್ಲೇಖಿಸಿ, ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2003ರ ಅಡಿಯಲ್ಲಿ, ‘ಬೌದ್ಧ ಧರ್ಮವನ್ನು ಪ್ರತ್ಯೇಕ ಧರ್ಮವಾಗಿ ಪರಿಗಣಿಸಲಾಗುವುದು. ಈ ಕಾಯ್ದೆಯ ಸೆಕ್ಷನ್ 5 (1) ಮತ್ತು 5 (2)ರ ಅಡಿಯಲ್ಲಿ, ಬೌದ್ಧ, ಸಿಖ್ ಮತ್ತು ಜೈನ ಧರ್ಮಕ್ಕೆ ಮತಾಂತರಗೊಳ್ಳುವ ಹಿಂದೂಗಳು ನಿಗದಿತ ನಮೂನೆಯಲ್ಲಿ ಪೂರ್ವಾನುಮತಿ ಪಡೆಯುವುದು ಕಡ್ಡಾಯ’ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.