ADVERTISEMENT

ಸಾಮಾಜಿಕ ಮಾಧ್ಯಮಗಳಿಂದ ಮಕ್ಕಳನ್ನು ದೂರ ಇಡಲು ಗುಜರಾತ್ ಸರ್ಕಾರದಿಂದ ಮಾರ್ಗಸೂಚಿ

ಸತೀಶ್ ಝಾ
Published 10 ಜನವರಿ 2025, 10:40 IST
Last Updated 10 ಜನವರಿ 2025, 10:40 IST
   

ಅಹಮದಾಬಾದ್: ಸಾಮಾಜಿಕ ಮಾಧ್ಯಮ ಮತ್ತು ಸ್ಮಾರ್ಟ್‌ಫೋನ್‌ಗಳ ನಕಾರಾತ್ಮಕ ಪರಿಣಾಮಗಳಿಂದ ಮಕ್ಕಳನ್ನು ದೂರವಿಡಲು ಶಿಕ್ಷಕರು, ಪೋಷಕರು ಮತ್ತು ಮಕ್ಕಳಿಗೆ ಮಾರ್ಗಸೂಚಿಗಳನ್ನು ರೂಪಿಸುವುದಾಗಿ ಗುಜರಾತ್ ಸರ್ಕಾರ ಪ್ರಕಟಿಸಿದೆ.

ಮಕ್ಕಳ ಮೇಲೆ ಸಾಮಾಜಿಕ ಮಾಧ್ಯಮ ಮತ್ತು ಸ್ಮಾರ್ಟ್‌ಫೋನ್‌ಗಳ ಪ್ರಭಾವದ ಬಗ್ಗೆ ಸರ್ಕಾರವು ಚಿಂತಿತವಾಗಿದೆ ಎಂದು ಅದು ಹೇಳಿದೆ.

ಇಂತಹ ಮಾರ್ಗಸೂಚಿಗಳನ್ನು ಜಾರಿಗೆ ತರುತ್ತಿರುವ ದೇಶದಲ್ಲೇ ಮೊದಲ ರಾಜ್ಯ ಗುಜರಾತ್ ಆಗಿದೆ ಎಂದು ಹೇಳಿರುವ ರಾಜ್ಯ ಶಿಕ್ಷಣ ಸಚಿವ ಪ್ರಫುಲ್ ಪನ್ಶೇರಿಯಾ, ‘ಮಕ್ಕಳು ಅತಿಯಾದ ಸಾಮಾಜಿಕ ಮಾಧ್ಯಮ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದರಿಂದ ಅವರ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಮೊಬೈಲ್ ಫೋನ್ ಬಳಕೆಯನ್ನು ಕಡಿಮೆ ಮಾಡಲು ಮತ್ತು ಕ್ರೀಡೆಗಳತ್ತ ಹೆಚ್ಚಿನ ಗಮನ ಹರಿಸುವಂತೆ ಮಾಡಲು ನಿಯಮಗಳನ್ನು ರೂಪಿಸಲಾಗುವುದು’ಎಂದಿದ್ದಾರೆ.

ADVERTISEMENT

ಹೊಸ ನಿಯಮಗಳ ಪ್ರಕಾರ, ಶಿಕ್ಷಕರು ತರಗತಿಯಲ್ಲಿ ಮೊಬೈಲ್ ಫೋನ್ ಬಳಸುವುದನ್ನು ನಿಷೇಧಿಸಲಾಗುತ್ತದೆ. ಪ್ರಾಥಮಿಕ ಶಾಲೆಯ ಮಕ್ಕಳು ಮೊಬೈಲ್ ಫೋನ್ ಜೊತೆ ಶಾಲೆಗೆ ಬರುವುದನ್ನು ತಡೆಯಲು ಕಠಿಣ ನಿಯಮ ರೂಪಿಸಲಾಗುವುದು ಎಂದಿದ್ದಾರೆ.

ಮಕ್ಕಳ ವಿಶ್ವವಿದ್ಯಾನಿಲಯ, ಶಿಕ್ಷಕರ ವಿಶ್ವವಿದ್ಯಾಲಯ ಮತ್ತು ಮನೋವೈದ್ಯರೊಂದಿಗೆ ಸಮಾಲೋಚಿಸಿ ಮಕ್ಕಳು, ಪೋಷಕರು ಮತ್ತು ಶಿಕ್ಷಕರಿಗೆ ಮಾರ್ಗಸೂಚಿ ರಚಿಸಿ ಸುತ್ತೋಲೆ ಹೊರಡಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

‘ಮಕ್ಕಳನ್ನು ಸಾಮಾಜಿಕ ಮಾಧ್ಯಮದಿಂದ ದೂರವಿಡಲು ಮಾರ್ಗಸೂಚಿಗಳನ್ನು ರೂಪಿಸುತ್ತಿರುವ ದೇಶದ ಮೊದಲ ರಾಜ್ಯ ಗುಜರಾತ್ ಆಗಲಿದೆ. ಓದುವ ಹವ್ಯಾಸ ಮತ್ತು ಕ್ರೀಡಾ ಚಟುವಟಿಕೆಗಳನ್ನು ಬೆಳೆಸುವ ಅಭಿಯಾನವನ್ನು ಪ್ರಾರಂಭಿಸುತ್ತೇವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.