ADVERTISEMENT

ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 14:43 IST
Last Updated 6 ಆಗಸ್ಟ್ 2021, 14:43 IST
ಸಂಜೀವ್‌ ಭಟ್‌
ಸಂಜೀವ್‌ ಭಟ್‌   

ಅಹಮದಾಬಾದ್‌ (ಪಿಟಿಐ): ಮಾದಕ ವಸ್ತುವಿಗೆ ಸಂಬಂಧಿಸಿ ಎನ್‌ಡಿಪಿಎಸ್‌ ಕಾಯ್ದೆಯಡಿ 1996ರಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದ ಆರೋಪಗಳನ್ನು ಮಾರ್ಪಡಿಸುವಂತೆ ಕೋರಿ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಸಲ್ಲಿಸಿದ್ದ ಪರಿಷ್ಕರಣಾ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.

ನ್ಯಾಯಾಧೀಶ ಇಲೇಶ್ ವೋರಾ ಅವರು, ಭಟ್ ಅವರ ಅರ್ಜಿ ವಜಾಗೊಳಿಸಿದರಲ್ಲದೇ, ವಿಚಾರಣೆಯನ್ನು ತ್ವರಿತಗತಿಯಲ್ಲಿ ಆರಂಭಿಸಲು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದರು.

ಭಟ್‌ ಅವರು, ಕೆಳ ನ್ಯಾಯಾಲಯಗಳಲ್ಲಿ ಮತ್ತು ಹೈಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದು, ವಿಚಾರಣೆ ಪ್ರಕ್ರಿಯೆಯು ಇನ್ನಷ್ಟೇ ಆರಂಭವಾಗಬೇಕಿದೆ.

ADVERTISEMENT

ಗುಜರಾತ್‌ ಕೇಡರ್‌ನ ಅಧಿಕಾರಿಯಾದ ಸಂಜೀವ್‌ ಭಟ್‌ ಅವರನ್ನು 2018ರಲ್ಲಿ ಸಿಐಡಿ ಬಂಧಿಸಿದ್ದು, ಅವರು ಜೈಲಿನಲ್ಲಿದ್ದಾರೆ.

1996ರಲ್ಲಿ ಗುಜರಾತ್‌ನ ಬನಾಸಕಾಂಠಾ ಜಿಲ್ಲೆಯಲ್ಲಿ ಮಾದಕ ವಸ್ತು ಹೊಂದಿದ ಸುಳ್ಳು ಆರೋಪದ ಮೇಲೆ ವಕೀಲರೊಬ್ಬರನ್ನು ಬಂಧಿಸಿದ ಪ್ರಕರಣ ಇದು. ಘಟನೆ ನಡೆದ ಸಂದರ್ಭದಲ್ಲಿ ಸಂಜೀವ್‌ ಭಟ್‌ ಬನಾಸಕಾಂಠಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದರು. ಈ ಪ್ರಕರಣದ ವಿಚಾರಣೆಯನ್ನು ಬನಾಸಕಾಂಠಾ ವಿಚಾರಣಾ ನ್ಯಾಯಾಲಯ ನಡೆಸುತ್ತಿದೆ. ಇದಕ್ಕೂ ಮೊದಲು 1990ರಲ್ಲಿ ಕಸ್ಟಡಿಯಲ್ಲಿದ್ದ ವ್ಯಕ್ತಿಯ ಸಾವಿನ ಪ್ರಕರಣ ಸಂಬಂಧ ಇವರಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಕೆಲಸಕ್ಕೆ ಅನಧಿಕೃತ ಗೈರು ಹಾಜರಾದ ಕಾರಣ ನೀಡಿ ಭಟ್‌ ಅವರನ್ನು 2015ರಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.