ಹೈಕೋರ್ಟ್ ಆದೇಶ
ಅಹಮದಾಬಾದ್: ‘ಯಾವುದೇ ವ್ಯಕ್ತಿ ಇನ್ನೊಂದು ಧರ್ಮಕ್ಕೆ ತಾನು ಮತಾಂತರಗೊಂಡು, ನಂತರ ಇತರರನ್ನೂ ಮತಾಂತರಗೊಳಿಸಲು ಯತ್ನಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.
ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರಭಾವ ಬೀರಿದ, ಒತ್ತಡ ಹೇರಿದ ಮತ್ತು ಆಮಿಷ ಒಡ್ಡಿದ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಉದ್ದೇಶಿಸಿ ನ್ಯಾ. ನಿರ್ಜಾರ್ ದೇಸಾಯಿ ಅವರು ಈ ಹೇಳಿಕೆ ನೀಡಿದ್ದಾರೆ.
‘ಮೂಲತಃ ನಾವು ಹಿಂದೂಗಳಾಗಿದ್ದು, ನಮ್ಮನ್ನು ಇಸ್ಲಾಂಗೆ ಮತಾಂತರಿಸಲಾಗಿದೆ. ನಾವು ಈ ಪ್ರಕರಣದಲ್ಲಿ ಬಲಿಪಶುಗಳಾಗಿದ್ದೇವೆ. ಆದರೂ ನಮ್ಮ ವಿರುದ್ಧ ಮತಾಂತರದ ಆರೋಪ ಮಾಡಲಾಗಿದೆ. ನಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ ಆರೋಪಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಇವರ ವಿರುದ್ಧ ಹಲವರು ಮತಾಂತರದ ಆರೋಪ ಮಾಡಿದ್ದು, ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಎಫ್‌ಐಆರ್ ರದ್ದು ಕೋರಿ ಸಲ್ಲಿಕೆಯಾದ ಅರ್ಜಿಯನ್ನು ಪೀಠ ವಜಾಗೊಳಿಸಿದೆ. ‘ಪ್ರಥಮ ಮಾಹಿತಿ ವರದಿಯಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಒತ್ತಡ, ಆಮಿಷ ಹಾಗೂ ಪ್ರಭಾವ ಬೀರಿದ್ದು ದಾಖಲಾಗಿದೆ. ಜತೆಗೆ ಸಾಕ್ಷಿಗಳೂ ಅದನ್ನೇ ಹೇಳಿದ್ದಾರೆ. ಈ ಎಲ್ಲವನ್ನೂ ಪರಿಶೀಲಿಸಿದ ನ್ಯಾಯಾಲಯವು, ಮತಾಂತರದ ಸಂತ್ರಸ್ತರು ಎಂದು ಹೇಳಿಕೊಂಡಿರುವ ಆರೋಪಿಗಳು ಮೇಲ್ನೋಟಕ್ಕೆ ಮತಾಂತರದಲ್ಲಿ ಭಾಗಿಯಾಗಿದ್ದಾರೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.
‘ಹೀಗಾಗಿ ಆರೋಪ ಹೊತ್ತವರು ಹಿಂದೆ ಹಿಂದೂಗಳಾಗಿದ್ದರು ಮತ್ತು ಮತಾಂತರದ ಸಂತ್ರಸ್ತರು ಎಂದು ಒಪ್ಪಲು ಸಾಧ್ಯವಿಲ್ಲ. ಎಫ್‌ಐಆರ್‌ನಲ್ಲಿ ದಾಖಲಾಗಿರುವ, ತನಿಖೆಯಲ್ಲಿ ಸಂಗ್ರಹಿಸಲಾದ ಸಾಕ್ಷ್ಯಗಳು ಮತ್ತು ಆರೋಪ ಪಟ್ಟಿಯನ್ನು ಗಮನಿಸಿದರೆ ಇವರು ಸಂತ್ರಸ್ತರು ಎಂದು ಹೇಳಲು ಸಾಧ್ಯವಿಲ್ಲ’ ಎಂದು ಹೇಳಿದೆ.
‘ಇಸ್ಲಾಂಗೆ ಮತಾಂತರಗೊಂಡಿದ್ದಕ್ಕೆ ಮೂವರು ವ್ಯಕ್ತಿಗಳು ಹೆಬ್ಬೆಟ್ಟಿನ ರುಜುವಾತನ್ನು ಪಡೆದಿದ್ದಾರೆ ಎಂದು ಸಂತ್ರಸ್ತರು ಹೇಳಿಕೊಂಡಿದ್ದಾರೆ. ಈ ಕಾರ್ಯ ನಡೆಸಿದ್ದಕ್ಕಾಗಿ ಮೂವರಲ್ಲಿ ಒಬ್ಬರಿಗೆ ಆರ್ಥಿಕ ನೆರವು ಲಭಿಸುತ್ತಿದೆ. ಇವರು ಸುಮಾರು 37 ಹಿಂದೂ ಕುಟುಂಬಗಳ ನೂರಕ್ಕೂ ಹೆಚ್ಚು ಜನರನ್ನು ಇಸ್ಲಾಂಗೆ ಮತಾಂತರಿಸಿದ್ದಾರೆ. ಸಂತ್ರಸ್ತರಿಗೆ ಹಣದ ಆಮಿಷ ಒಡ್ಡಲಾಗಿದೆ. ತಿರಸ್ಕರಿಸಿದವರನ್ನು ಬೆದರಿಸಲಾಗಿದೆ. ನಂತರ ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಎಫ್‌ಐಆರ್ ದಾಖಲಿಸಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣವು ಒಂಬತ್ತು ಜನರ ವಿರುದ್ಧ ದಾಖಲಾಗಿದೆ. ಒಟ್ಟು 16 ಜನ ಇದರಲ್ಲಿ ಭಾಗಿಯಾಗಿದ್ದರು ಎಂದೆನ್ನಲಾಗಿದೆ. ಇವರೆಲ್ಲರೂ ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದರಲ್ಲೊಬ್ಬರು ವಿದೇಶಿ ಪ್ರಜೆಯಾಗಿದ್ದು, ಮತಾಂತರಕ್ಕೆ ಹಣ ಸಹಾಯ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
'ಆರೋಪ ಹೊತ್ತಿರುವವರಿಗೆ ಯಾವುದೇ ರಿಯಾಯಿತಿ ನೀಡಲಾಗಿಲ್ಲ. ಅದರಲ್ಲೂ ವಿದೇಶಿ ಪ್ರಜೆ ಎಂದುಕೊಂಡಿರುವವರು ಪ್ರಕರಣ ದಾಖಲಾಗುವ ಮೊದಲು 25 ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಪ್ರಕರಣ ದಾಖಲಾದ ನಂತರ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಆರೋಪವೂ ಇದೆ. ಹೀಗಾಗಿ ಇವರ ಅರ್ಜಿ ಪುರಸ್ಕರಿಸಲು ಸಕಾರಣಗಳಿಲ್ಲ’ ಎಂದು ಪೀಠ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.