ADVERTISEMENT

ಅತ್ಯಾಚಾರವಾಗಬಾರದು ಎಂದರೆ ಮನೆಯಲ್ಲಿಯೇ ಇರಿ: ಗುಜರಾತ್ ರಸ್ತೆಗಳಲ್ಲಿ ಪೋಸ್ಟರ್!

ಪಿಟಿಐ
Published 2 ಆಗಸ್ಟ್ 2025, 8:29 IST
Last Updated 2 ಆಗಸ್ಟ್ 2025, 8:29 IST
   

ಅಹಮದಾಬಾದ್‌: ‘ಅತ್ಯಾಚಾರವಾಗಬಾರದು ಎಂದರೆ ಮನೆಯಲ್ಲಿಯೇ ಇರಿ’ ಎಂಬ ಸಂದೇಶ ಹೊಂದಿದ್ದ ಪೋಸ್ಟರ್‌ಗಳನ್ನು ಗುಜರಾತ್‌ನ ಅಹಮದಾಬಾದ್‌ನ ವಿವಿಧ ರಸ್ತೆ ವಿಭಜಕಗಳ ಮೇಲೆ ಶನಿವಾರ ಅಳವಡಿಸಿರುವುದು ಕಂಡುಬಂದಿದೆ.

ಸುರಕ್ಷತಾ ಅಭಿಯಾನದ ಕುರಿತು ಅಹಮದಾಬಾದ್‌ ಸಂಚಾರ ಪೊಲೀಸರು ಪ್ರಾಯೋಜಿಸಿದ ಪೋಸ್ಟರ್‌ಗಳಲ್ಲಿಯೇ ಈ ರೀತಿ ಪದ ಬಳಕೆ ಮಾಡಿರುವುದಕ್ಕೆ ತೀವ್ರ ಟೀಕೆಗೆ ಗುರಿಯಾಗಿದೆ. 

‘ತಡರಾತ್ರಿ ಪಾರ್ಟಿಗಳಲ್ಲಿ ಭಾಗವಹಿಸಬೇಡಿ. ಇದರಿಂದ ಅತ್ಯಾಚಾರ, ಸಾಮೂಹಿಕ ಅತ್ಯಾಚಾರವಾಗಬಹುದು. ಕತ್ತಲು, ನಿರ್ಜನ ಪ್ರದೇಶಗಳಲ್ಲಿ ನಿಮ್ಮ ಸ್ನೇಹಿತರ ಜೊತೆ ಹೋಗಬೇಡಿ. ಹೆಣ್ಣುಮಗಳು ಅತ್ಯಾಚಾರ, ಸಾಮೂಹಿಕ ಅತ್ಯಾಚಾರಕ್ಕೊಳಗಾದರೆ ಏನು ಮಾಡಬೇಕು?’ ಎಂದು ಸೊಲಾ ಹಾಗೂ ಚಾಂದ್ಲೋಡಿಯಾ ಪ್ರದೇಶಗಳಲ್ಲಿ ಹಾಕಿದ್ದ ಪೋಸ್ಟರ್‌ನಲ್ಲಿ ಬರೆಯಲಾಗಿತ್ತು. ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ, ಅವುಗಳನ್ನು ತೆಗೆದುಹಾಕಲಾಗಿದೆ.

ADVERTISEMENT

‘ರಸ್ತೆ ಸುರಕ್ಷತೆ ಕುರಿತು ಪೋಸ್ಟರ್‌ಗೆ ಮಾತ್ರ, ಸಂಚಾರ ಪೊಲೀಸರು ಪ್ರಾಯೋಜಕತ್ವ ವಹಿಸಿದ್ದರೇ ಹೊರತು, ಮಹಿಳೆಯರ ಸುರಕ್ಷತೆ ವಿಚಾರಕ್ಕಲ್ಲ’ ಎಂದು ಡಿಸಿಪಿ ನೀತಾ ದೇಸಾಯಿ (ಸಂಚಾರ ಪಶ್ಚಿಮ) ತಿಳಿಸಿದ್ದಾರೆ.

‘ಸತರ್ಕತಾ ಸ್ವಯಂಸೇವಾ ಸಂಸ್ಥೆಯು ಈ ಪೋಸ್ಟರ್‌ ರಚಿಸಿದ್ದು, ಇದಕ್ಕೂ ಮುನ್ನ ಪೊಲೀಸರ ಅನುಮತಿ ಪಡೆದಿರಲಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಶಾಲಾ–ಕಾಲೇಜುಗಳಲ್ಲಿ ಸಂಚಾರ ಜಾಗೃತಿ ಮೂಡಿಸಲು ಪೋಸ್ಟರ್‌ ರಚಿಸಿ, ತೋರಿಸಿದ್ದರು. ವಿವಾದ ಹುಟ್ಟುಹಾಕಿರುವ ಪೋಸ್ಟರ್‌ ಅನ್ನು ತೋರಿಸದೇ, ಅಳವಡಿಸಿದ್ದಾರೆ’ ಎಂದು ದೇಸಾಯಿ ಹೇಳಿದ್ದಾರೆ.

ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಈ ಪೋಸ್ಟರ್‌ಗಳನ್ನು ತೆಗೆದುಹಾಕಲಾಗಿದೆ.

ಆಮ್‌ ಆದ್ಮಿ ಪಕ್ಷ ಕಿಡಿ
‘ಗುಜರಾತ್‌ನಲ್ಲಿರುವ ಬಿಜೆಪಿ ಸರ್ಕಾರವು ಮಹಿಳೆಯರ ಸಬಲೀಕರಣದ ಕುರಿತು ಮಾತನಾಡುತ್ತಿದೆ. ವಾಸ್ತವ ಚಿತ್ರಣವು ಸಂಪೂರ್ಣವಾಗಿ ಭಿನ್ನವಾಗಿದೆ. ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ 6500 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು 36 ಸಾಮೂಹಿಕ ಅತ್ಯಾಚಾರಗಳು ನಡೆದಿವೆ. ರಾಜ್ಯದಲ್ಲಿ ನಿತ್ಯವೂ 5 ಅತ್ಯಾಚಾರಗಳು ನಡೆಯುತ್ತಿವೆ’ ಎಂದು ಆಮ್ ಆದ್ಮಿ ಪಕ್ಷವು ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.