ADVERTISEMENT

ಗುಜರಾತ್‌ ವಿಧಾನಸಭೆ ಚುನಾವಣೆ: 10 ಲಕ್ಷ ನೌಕರಿ ಸೃಷ್ಟಿಯ ವಾಗ್ದಾನ - ಕಾಂಗ್ರೆಸ್‌

ಗುಜರಾತ್‌ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪ್ರಣಾಳಿಕೆ ಪ್ರಕಟ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 13:39 IST
Last Updated 12 ನವೆಂಬರ್ 2022, 13:39 IST
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರು ಕಾಂಗ್ರೆಸ್ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆ ಮಾಡಿದರು ಪಿಟಿಐ ಚಿತ್ರ
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರು ಕಾಂಗ್ರೆಸ್ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆ ಮಾಡಿದರು ಪಿಟಿಐ ಚಿತ್ರ   

ಅಹಮದಾಬಾದ್ (ಪಿಟಿಐ): ಗುಜರಾತ್‌ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯನ್ನು ಶನಿವಾರ ಪ್ರಕಟಿಸಿದೆ. ಸರ್ಕಾರಿ ಮತ್ತು ಅರೆಸರ್ಕಾರಿ ಇಲಾಖೆಗಳಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ, ₹500ಕ್ಕೆ ಅಡುಗೆ ಅನಿಲ ಸಿಲಿಂಡರ್‌, ಪ್ರತಿ ಮನೆಗೆ ತಿಂಗಳಿಗೆ 300 ಯೂನಿಟ್‌ ಉಚಿತ ವಿದ್ಯುತ್ ಪ್ರಣಾಳಿಕೆಯಲ್ಲಿ ಇರುವ ಮುಖ್ಯ ಭರವಸೆಗಳಾಗಿವೆ.

ನಿರುದ್ಯೋಗಿಗಳಿಗೆ ತಿಂಗಳಿಗೆ ₹3,000 ಭತ್ಯೆ, ಅಂಗವಿಕಲರು, ವಿಧವೆಯರು, ಹಿರಿಯ ನಾಗರಿಕರು ಮತ್ತು ಅಗತ್ಯ ಇರುವ ಮಹಿಳೆಯರಿಗೆ ₹2,000 ಮಾಸಾಶನ, ಮೀನುಗಾರರ ₹3 ಲಕ್ಷ ವರೆಗಿನ ಸಾಲ ಮನ್ನಾ ಮಾಡುವ ವಾಗ್ದಾನವನ್ನೂ ಪ್ರಣಾಳಿಕೆಯು ನೀಡಿದೆ.

ರಾಜಸ್ಥಾನ ಮುಖ್ಯಮಂತ್ರಿ ಮತ್ತು ಗುಜರಾತ್‌ ಚುನಾವಣೆಗೆ ಕಾಂಗ್ರೆಸ್‌ ವೀಕ್ಷಕರಾಗಿರುವ ಅಶೋಕ್‌ ಗೆಹಲೋತ್ ಅವರು ಪಕ್ಷದ ರಾಜ್ಯ ಘಟಕದ ಕೇಂದ್ರ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದರು. ಗುಜರಾತ್‌ನ 65 ಲಕ್ಷಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿ ಅವರ ಜೊತೆ ಸಂವಹನ ನಡೆಸಿ ಈ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ ಎಂದು ಪ್ರಣಾಳಿಕೆ ಸಮಿತಿ ಅಧ್ಯಕ್ಷ ದೀಪಕ್‌ ಬಬರಿಯಾ ಹೇಳಿದ್ದಾರೆ.

ADVERTISEMENT

ಪಕ್ಷದ ಮುಖಂಡ ರಾಹುಲ್‌ ಗಾಂಧಿ ಅವರ ಸೂಚನೆಯಂತೆ, ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ಪ್ರಣಾಳಿಕೆ ಅನುಷ್ಠಾನ ಆಯೋಗವನ್ನು ರಚಿಸಲಿದ್ದೇವೆ. ಸರ್ಕಾರ ರಚನೆಯಾದ ಕೂಡಲೇ ಪ್ರಣಾಳಿಕೆಯು ಸರ್ಕಾರದ ಅಧಿಕೃತ ಕಾರ್ಯಸೂಚಿ ಆಗಲಿದೆ ಎಂದೂ ಬಬರಿಯಾ ತಿಳಿಸಿದ್ದಾರೆ.

ಗುಜರಾತ್‌ನಲ್ಲಿ ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಲಾಗುವುದು, ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರಿಸಲಾಗುವುದು ಎಂದು ಗೆಹಲೋತ್‌ ಭರವಸೆ ಕೊಟ್ಟರು.

2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ಬಿಲ್ಕಿಸ್‌ ಬಾನು ಅವರ ಮೇಲೆ ಅತ್ಯಾಚಾರ ಎಸಗಿ ಅವರ ಕುಟುಂಬದವರನ್ನು ಹತ್ಯೆ ಮಾಡಿದ 11 ಹಂತಕರ ಶಿಕ್ಷೆಯನ್ನು ಕಡಿತ ಮಾಡಿ, ಬಿಡುಗಡೆಗೊಳಿಸಿದ ನಿರ್ಧಾರವನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಕಾಂಗ್ರೆಸ್ ಹೇಳಿದೆ. ಆಗಸ್ಟ್‌ 15ರಂದು ಈ ಅಪರಾಧಿಗಳು ಜೈಲಿನಿಂದ ಹೊರಗೆ ಬಂದಿದ್ದಾರೆ.

ಪ್ರಣಾಳಿಕೆಯಲ್ಲಿ ಏನಿದೆ?

* ಸರ್ಕಾರಿ ಆಸ್ಪತ್ರೆಗಳಲ್ಲಿ ₹10 ಲಕ್ಷದವರೆಗಿನ ಚಿಕಿತ್ಸೆ ಉಚಿತ

* ಅರ್ಹ ವಿದ್ಯಾರ್ಥಿಗಳಿಗೆ ₹20 ಸಾವಿರದವರೆಗೆ ಶಿಷ್ಯವೇತನ

* ಆದಾಯ ತೆರಿಗೆ ಪಾವತಿಸುವ ವೇತನದಾರರು ಮತ್ತು ಇತರ ವೃತ್ತಿಪರರಿಗೆ ವೃತ್ತಿಪರ ತೆರಿಗೆಯಿಂದ ವಿನಾಯಿತಿ

* ಗೋವುಗಳ ರಕ್ಷಣೆ ಮತ್ತು ಗೋಶಾಲೆಗಳ ನಿರ್ಮಾಣಕ್ಕಾಗಿ ₹1,000 ಕೋಟಿ ಮೀಸಲು

* ನೇಮಕಾತಿ ಅಕ್ರಮ ತಡೆಗಾಗಿ ವಿಶೇಷ ಕಾಯ್ದೆ ಜಾರಿ, ತ್ವರಿತಗತಿ ನ್ಯಾಯಾಲಯ ಸ್ಥಾಪನೆ

ಮೋದಿ ಸ್ಟೇಡಿಯಂಗೆ ಪಟೇಲ್‌ ಹೆಸರು

ಅಧಿಕಾರಕ್ಕೆ ಬಂದರೆ, ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನ ಹೆಸರನ್ನು ಬದಲಾಯಿಸುವುದಾಗಿ ಕಾಂಗ್ರೆಸ್ ಪಕ್ಷವು ವಾಗ್ದಾನ ಮಾಡಿದೆ. ಈ ಕ್ರೀಡಾಂಗಣದ ಹೆಸರನ್ನು ಸರ್ದಾರ್‌ ಪಟೇಲ್‌ ಸ್ಟೇಡಿಯಂ ಎಂದು ಬದಲಾಯಿಸುವುದಾಗಿ ಪಕ್ಷವು ಹೇಳಿದೆ.

‘ಇಂದು ಕರಮ್‌ಸದ್‌ನ (ಸರ್ದಾರ್ ವಲ್ಲಭಭಾಯ್‌ ಪಟೇಲ್‌ ಅವರ ಹುಟ್ಟೂರು) ಕೆಲವು ಕಾರ್ಯಕರ್ತರು ಬಂದು ಸ್ಟೇಡಿಯಂನ ಮೂಲ ಹೆಸರನ್ನೇ ಉಳಿಸಿಕೊಳ್ಳಬೇಕು ಎಂದು ಮನವಿಯೊಂದನ್ನು ಕೊಟ್ಟಿದ್ದಾರೆ’ ಎಂದು ಬಬರಿಯಾ ಹೇಳಿದ್ದಾರೆ.

ಸರ್ದಾರ್ ಪಟೇಲ್ ಅವರ ವ್ಯಕ್ತಿತ್ವವು ಮೋದಿ ಅವರ ವ್ಯಕ್ತಿತ್ವಕ್ಕಿಂತ ಬಹಳ ದೊಡ್ಡದು. ಪಟೇಲ್‌ ಅವರ ಹೆಸರು ಬದಲಿಸಿ ತಮ್ಮ ಹೆಸರು ಇರಿಸಿಕೊಳ್ಳಲು ಮೋದಿ ಅವರಿಗೆ ನಾಚಿಕೆ ಆಗಬೇಕು ಎಂದು ಕಾಂಗ್ರೆಸ್‌ ಮುಖಂಡ ಮಧುಸೂದನ ಮಿಸ್ತ್ರಿ ಹೇಳಿದ್ದಾರೆ. ‘ಪಟೇಲ್‌ ಅವರ ಸಮಕ್ಕೆ ತಾವು ಇರಬೇಕು ಎಂಬ ಕಾರಣಕ್ಕೆ ಮೋದಿ ಅವರು ಸ್ಟೇಡಿಯಂನ ಹೆಸರು ಬದಲಾಯಿಸಿದರು. ಮೋದಿ ಅವರು ತಮ್ಮನ್ನು ಪಟೇಲ್‌ ಅವರೊಂದಿಗೆ ಹೋಲಿಸಿಕೊಳ್ಳುತ್ತಿದ್ದರೂ ಮೋದಿ ಅವರು ಪಟೇಲ್‌ ಅವರ ಹತ್ತಿರಕ್ಕೂ ಬರುವುದಿಲ್ಲ’ ಎಂದು ಮಿಸ್ತ್ರಿ ಹೇಳಿದ್ದಾರೆ.

‘ಪಟೇಲ್‌ ಕುರಿತು ಮಾತನಾಡಲು ನೈತಿಕತೆ ಇಲ್ಲ’

ಭಾರತದ ಮೊದಲ ಗೃಹ ಸಚಿವ ಮತ್ತು ಉಪಪ್ರಧಾನಿಯಾಗಿದ್ದ ಸರ್ದಾರ್ ಪಟೇಲ್ ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್‌ಗೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಹೇಳಿದ್ದಾರೆ.

ಸ್ವಾತಂತ್ರ್ಯ ಬಂದ ಬಳಿಕ ಪ್ರಧಾನಿ ಹುದ್ದೆಗೆ ಎಲ್ಲರ ಆಯ್ಕೆ ಸರ್ದಾರ್‌ ಪಟೇಲ್‌ ಆಗಿದ್ದರು. ಆದರೆ, ಜವಾಹರಲಾಲ್‌ ನೆಹರೂ ಪ್ರಧಾನಿ ಆದರು. ಪಟೇಲ್‌ ಅವರ ಹೆಸರಿನಲ್ಲಿ 8-10 ವರ್ಷ ಕಾಲ ಕಾಂಗ್ರೆಸ್‌ ಏನನ್ನೂ ಮಾಡಿರಲಿಲ್ಲ. 1958–60ರ ಬಳಿಕವೇ ಏನನ್ನಾದರೂ ಮಾಡಿದರು. ಕಾಂಗ್ರೆಸ್‌ನ ಯಾವುದೇ ಮುಖಂಡ ಸರ್ದಾರ್ ಪ್ರತಿಮೆಗೆ ಭೇಟಿ ನೀಡಿದ್ದು ನನಗೆ ಗೊತ್ತಿಲ್ಲ ಎಂದು ತ್ರಿವೇದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.