ADVERTISEMENT

Gujarat Polls: ಕಾಂಗ್ರೆಸ್ ಪರ ಪ್ರಚಾರ ಮಾಡಿದ ಜಡೇಜ ತಂದೆ, ಸೋದರಿಗೆ ಹಿನ್ನಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಡಿಸೆಂಬರ್ 2022, 10:36 IST
Last Updated 8 ಡಿಸೆಂಬರ್ 2022, 10:36 IST
ರವೀಂದ್ರ ಜಡೇಜ ಹಾಗೂ ಪತ್ನಿ ರಿವಾಬಾ ಜಡೇಜ
ರವೀಂದ್ರ ಜಡೇಜ ಹಾಗೂ ಪತ್ನಿ ರಿವಾಬಾ ಜಡೇಜ   

ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಜಾಮ್‌ನಗರ (ಉತ್ತರ) ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕ್ರಿಕೆಟಿಗ ರವೀಂದ್ರ ಜಡೇಜ ಅವರ ಪತ್ನಿ ರಿವಾಬಾ ಜಡೇಜ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಇದರೊಂದಿಗೆ ಕಾಂಗ್ರೆಸ್ ಪರ ಪ್ರಚಾರ ಮಾಡಿದ ಜಡೇಜ ಅವರ ತಂದೆ ಅನಿರುದ್ದಸಿನ್ಹ ಮತ್ತು ಸಹೋದರಿ ನೈನಬಾ ಜಡೇಜ ಅವರಿಗೆ ಹಿನ್ನಡೆಯಾಗಿದೆ.

ರಿವಾಬಾ ಜಡೇಜ ಅವರು ತಮ್ಮ ಸಮೀಪದ ಸ್ಪರ್ಧಿ ಆಮ್ ಆದ್ಮಿ ಪಕ್ಷದ ಕರ್ಸನ್ ಕರ್ಮುರ್ ಅವರನ್ನು 40,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು. ಈ ಮೂಲಕ ತಮ್ಮ ಮೊದಲ ಪ್ರಯತ್ನದಲ್ಲೇ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಮೂರನೇ ಸ್ಥಾನ ಪಡೆದು ಹಿನ್ನಡೆ ಅನುಭವಿಸಿತು.

ಜಡೇಜ ಅವರ ಪತ್ನಿ ರಿವಾಬಾಗೆ ಕುಟುಂಬದಿಂದಲೇ ಕಠಿಣ ಪೈಪೋಟಿ ಎದುರಾಗಿತ್ತು. ಜಡೇಜ ಅವರ ತಂದೆ ಕಾಂಗ್ರೆಸ್ ಪರ ಮತ ಹಾಕುವಂತೆ ಮನವಿ ಮಾಡಿದ್ದರು. ಅಲ್ಲದೆ ಇದು ರಾಜಕೀಯ ವಿಷಯವಾಗಿದ್ದು, ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದ್ದರು.

ಜಡೇಜ ಅವರ ಅಕ್ಕ ನೈನಬಾ, ಕಾಂಗ್ರೆಸ್ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ರಿವಾಬಾ ಜಡೇಜ ಯಶಸ್ವಿಯಾಗಿದ್ದಾರೆ.

ಇವೆಲ್ಲದರ ನಡುವೆ ಗಾಯದಿಂದಾಗಿ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ರವೀಂದ್ರ ಜಡೇಜ ವಿಶ್ರಾಂತಿಯ ಸಮಯದಲ್ಲಿ ಪತ್ನಿ ಪರ ಪ್ರಚಾರ ಮಾಡಿ ಗಮನ ಸೆಳೆದಿದ್ದರು.

ಇಲ್ಲಿ ಕುತೂಹಲಕಾರಿ ಸಂಗತಿಯೆಂದರೆ ಬಿಜೆಪಿ ತನ್ನ ಹಾಲಿ ಶಾಸಕ ಧಮೇಂದ್ರ ಸಿನ್ಹ ಜಡೇಜ ಅವರನ್ನು ಕೈಬಿಟ್ಟು ಜಡೇಜ ಪತ್ನಿ ರಿವಾಬಾಗೆ ಟಿಕೆಟ್ ನೀಡಿತ್ತು.

ಜಾಮ್‌ನಗರ (ಉತ್ತರ) ಕ್ಷೇತ್ರದಲ್ಲಿ 2012ರಲ್ಲಿ ಕಾಂಗ್ರೆಸ್ ಮತ್ತು 2017ರಲ್ಲಿ ಬಿಜೆಪಿ ಗೆಲುವು ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.