ADVERTISEMENT

ಹಿಂಸಾಚಾರ: ಮೋದಿ ನಿರ್ದೋಷಿ ತೀರ್ಪಿನ ವಿರುದ್ಧದ ಅರ್ಜಿ ಏ.13ಕ್ಕೆ ವಿಚಾರಣೆ

ಸುಪ್ರೀಂಕೋರ್ಟ್‌ನಲ್ಲಿ ಝಾಕಿಯಾ ಜಾಫ್ರಿ ಮೇಲ್ಮನವಿ

ಪಿಟಿಐ
Published 16 ಮಾರ್ಚ್ 2021, 8:32 IST
Last Updated 16 ಮಾರ್ಚ್ 2021, 8:32 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: 2002ರಲ್ಲಿ ನಡೆದ ಗುಜರಾತ್‌ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ವಿಶೇಷ ತನಿಖಾ ತಂಡವು (ಎಸ್‌ಐಟಿ) ದೋಷ ಮುಕ್ತಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಏಪ್ರಿಲ್‌ 13 ರಂದು ನಡೆಯಲಿದೆ.

‘ಈ ಅರ್ಜಿ ವಿಚಾರಣೆಯ ದಿನಾಂಕವನ್ನು ಮುಂದೂಡುವ ಕುರಿತಾದ ಯಾವುದೇ ಮನವಿಯನ್ನು ಪರಿಗಣಿಸಲಾಗುವುದಿಲ್ಲ’ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಗಲಭೆಯಲ್ಲಿ ಹತ್ಯೆಗೀಡಾದ ಮಾಜಿ ಸಂಸದ ಎಹ್ಸಾನ್‌ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಅವರು ಈ ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

‘ಹಲವು ವಕೀಲರು ಈಗ ಮರಾಠ ಮೀಸಲಾತಿ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಈ ಅರ್ಜಿ ವಿಚಾರಣೆಯನ್ನು ಏಪ್ರಿಲ್‌ನಲ್ಲಿ ನಡೆಸಬೇಕು’ ಎಂದು ಜಾಫ್ರಿ ಪರ ವಕೀಲರಾದ ಕಪಿಲ್‌ ಸಿಬಲ್‌ ಅವರು ನ್ಯಾಯಮೂರ್ತಿ ಎ.ಎಂ ಖಾನ್‌ವಿಲ್ಕರ್‌ ಅವರಿಗೆ ಮನವಿ ಮಾಡಿದ್ದರು.

ಆದರೆ ಗುಜರಾತ್‌ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರುಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಅರ್ಜಿ ವಿಚಾರಣೆಯನ್ನುಮುಂದಿನ ವಾರವೇ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

‘ಎಸ್‌ಐಟಿ ಪರವಾಗಿ ಹಾಜರಿದ್ದ ಹಿರಿಯ ವಕೀಲ ಮುಕುಲ್‌ ರೋಹಟಗಿ ಅವರು ಕೂಡ ಅರ್ಜಿ ವಿಚಾರಣೆಯನ್ನು ಮುಂದೂಡಬಾರದು. ಆದಷ್ಟು ಬೇಗ ಈ ಪ್ರಕರಣದ ಬಗ್ಗೆ ತೀರ್ಮಾನ ಕೈಗೊಳ್ಳಬೇಕು’ ಎಂದು ಕೋರಿದರು.

‘ಈ ಅರ್ಜಿ ವಿಚಾರಣೆಯನ್ನು ಏಪ್ರಿಲ್‌ 13 ರಂದು ನಡೆಸಲಾಗುವುದು. ಇದನ್ನು ಮುಂದೂಡುವ ಕುರಿತಾದ ಯಾವುದೇ ಮನವಿಯನ್ನು ಪರಿಗಣಿಸಲಾಗುವುದಿಲ್ಲ’ ಎಂದು ನ್ಯಾಯಮೂರ್ತಿಗಳಾದ ದಿನೇಶ್‌ ಮಹೇಶ್ವರಿ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠವು ಹೇಳಿದೆ.

2002 ಫೆಬ್ರುವರಿ 28ರಂದು ಗುಜರಾತಿನ ಅಹಮದಾಬಾದ್‌ನಲ್ಲಿ ನಡೆದ ಹಿಂಸಾಚಾರದಲ್ಲಿ 68 ಮಂದಿ ಮೃತಪಟ್ಟಿದ್ದರು.

2012 ಫೆಬ್ರುವರಿ 8 ರಂದು ಎಸ್ಐಟಿಯು ಈ ಪ್ರಕರಣದಡಿ ಅಂದಿನ ಮುಖ್ಯಮಂತ್ರಿ ಮೋದಿ ಮತ್ತು 63 ಮಂದಿಗೆ ಕ್ಲೀನ್‌ ಚಿಟ್‌ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.