ADVERTISEMENT

ಹೆಣ್ಣು ಮಕ್ಕಳು ಮೊಬೈಲ್ ಬಳಸುವುದಕ್ಕೆ ಗುಜರಾತ್ ಠಾಕೂರ್ ಸಮುದಾಯದ ನಿರ್ಬಂಧ

ಐಎಎನ್ಎಸ್
Published 20 ಫೆಬ್ರುವರಿ 2023, 10:42 IST
Last Updated 20 ಫೆಬ್ರುವರಿ 2023, 10:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಾಲನ್‌ಪುರ (ಗುಜರಾತ್): ತಮ್ಮ ಸುಮದಾಯದ ಹೆಣ್ಣು ಮಕ್ಕಳು ಮೊಬೈಲ್‌ ಬಳಸದಂತೆ ಇಲ್ಲಿನ ಠಾಕೂರ್‌ ಸಮುದಾಯವು ನಿರ್ಬಂಧ ವಿಧಿಸಿದೆ.

ತಮ್ಮ ಸಂಪ್ರದಾಯಗಳಲ್ಲಿ ಸುಧಾರಣೆ ತರುವ ಸಲುವಾಗಿ ಠಾಕೂರ್‌ ಸಮುದಾಯವು ಅವಿರೋಧವಾಗಿ ನಿರ್ಣಯ ಹೊರಡಿಸಿದೆ. ಅದರಂತೆ, ಹೆಣ್ಣು ಮಕ್ಕಳು ಮೊಬೈಲ್‌ ಬಳಸುವುದನ್ನು ನಿಷೇಧಿಸಲು ತೀರ್ಮಾನಿಸಲಾಗಿದೆ.

ಪ್ರೇಮ ಪ್ರಕರಣಗಳು, ಹುಡುಗ–ಹುಡುಗಿಯರ ಸ್ನೇಹ ಅಥವಾ ಅಂತರ್‌ ಜಾತಿ ವಿವಾಹವನ್ನು ಉಲ್ಲೇಖಿಸಿ ಏನನ್ನೂ ಹೇಳದ ಸಮುದಾಯದ ನಾಯಕರು, 'ಹೆಣ್ಣು ಮಕ್ಕಳು ಮೊಬೈಲ್‌ ಬಳಸುವುದರಿಂದ ಹಲವು ಸಮಸ್ಯೆಗಳು ಉಂಟಾಗುತ್ತವೆ. ಹಾಗಾಗಿ ಅವರು ಮೊಬೈಲ್‌ ಬಳಸುವುದನ್ನು ನಿಷೇಧಿಸಲಾಗಿದೆ' ಎಂದಿದ್ದಾರೆ.

ADVERTISEMENT

ಕಾಂಗ್ರೆಸ್ ಶಾಸಕ ವವ್ ಗೇನಿಬೆನ್‌ ಠಾಕೂರ್‌ ಅವರ ಉಪಸ್ಥಿತಿಯಲ್ಲಿಯೇ ನಿರ್ಣಯ ಕೈಗೊಳ್ಳಲಾಗಿದೆ.

ಸಮುದಾಯದ ಸಭೆಯು ಬನಸ್ಕಂತ ಜಿಲ್ಲೆಯ ಭಭರ್‌ ತಾಲ್ಲೂಕಿನ ಲುನ್ಸೆಲಾ ಗ್ರಾಮದಲ್ಲಿ ಭಾನುವಾರ ನಡೆದಿದೆ. ನಿಶ್ಚಿತಾರ್ಥ ಹಾಗೂ ಮದುವೆ ಸಮಾರಂಭಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದನ್ನು ನಿಯಂತ್ರಿಸುವ ಬಗ್ಗೆಯೂ ಈ ವೇಳೆ ಮಾತುಕತೆ ನಡೆದಿದೆ.

ಸಮುದಾಯ ಹೊರಡಿಸಿರುವ ನಿರ್ಣಯದ ಪ್ರಕಾರ, ನಿಶ್ಚಿತಾರ್ಥ ಅಥವಾ ಮದುವೆ ಸಮಾರಂಭಕ್ಕೆ 11 ಮಂದಿಯಷ್ಟೇ ಭಾಗವಹಿಸಬೇಕು. ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರತಿ ಹಳ್ಳಿಯಲ್ಲಿಯೂ ಸಾಮೂಹಿಕ ವಿವಾಹ ನಡೆಸಬೇಕು. ಡಿಜೆ ಸೌಂಡ್‌ ವ್ಯವಸ್ಥೆ ಬಳಸಬಾರದು. ಮದುವೆಗಳಿಗೆ ಮಾಡುವ ವೆಚ್ಚಕ್ಕೆ ಸಾಧ್ಯವಾದಷ್ಟು ಕಡಿವಾಣ ಹಾಕಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ನಿಶ್ಚಿತಾರ್ಥದ ಬಳಿಕ ಸಂಬಂಧ ಕಡಿದುಕೊಳ್ಳುವ ಕುಟುಂಬಗಳಿಗೆ ದಂಡ ವಿಧಿಸಬೇಕು. ದಂಡದ ರೂಪದಲ್ಲಿ ಸಂಗ್ರಹಿಸಿದ ಹಣವನ್ನು ಶಿಕ್ಷಣ ಮತ್ತು ಮೂಲಸೌಕರ್ಯಗಳಿಗಾಗಿ ಬಳಸಬೇಕು. ಒಂದು ವೇಳೆ ಬಾಲಕಿಯರು ಉನ್ನತ ಶಿಕ್ಷಣದ ಸಲುವಾಗಿ ಪಟ್ಟಣಗಳಿಗೆ ಹೋಗುವುದಾದರೆ, ಹಳ್ಳಿಯಲ್ಲಿರುವ ಸಮುದಾಯದ ಸದಸ್ಯರು ಸಾರಿಗೆ ವ್ಯವಸ್ಥೆ ಮಾಡಬೇಕು ಎಂದೂ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.