ADVERTISEMENT

ಗುಜರಾತ್‌ ಚುನಾವಣೆ: ನಾಳೆ ದ್ವಿತೀಯ ಹಂತದ ಮತದಾನ

ಪಿಟಿಐ
Published 4 ಡಿಸೆಂಬರ್ 2022, 10:31 IST
Last Updated 4 ಡಿಸೆಂಬರ್ 2022, 10:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಹಮದಾಬಾದ್‌: ಗುಜರಾತ್‌ ವಿಧಾನಸಭಾ ಚುನಾವಣಾ ಸಮರ ಅಂತಿಮ ಹಂತ ತಲುಪಿದ್ದು, ಸೋಮವಾರ 2ನೇ ಹಂತದಲ್ಲಿ 14 ಜಿಲ್ಲೆಗಳ 93 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.


2017ರ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಈ ಕ್ಷೇತ್ರಗಳಲ್ಲಿ 51 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್‌ 39 ಹಾಗೂ ಇತರರು 3 ಸ್ಥಾನ ಪಡೆದುಕೊಂಡಿದ್ದರು.


ಕೇಂದ್ರ ಗುಜರಾತ್‌ನಲ್ಲಿ ಬಿಜೆಪಿ 37 ಸ್ಥಾನ ಪಡೆದಿದ್ದರೆ, ಕಾಂಗ್ರೆಸ್‌ 22 ಕ್ಷೇತ್ರಗಳಲ್ಲಿ ವಿಜಯಶಾಲಿಯಾಗಿತ್ತು. ಉತ್ತರ ಗುಜರಾತ್‌ನಲ್ಲಿ ಕಾಂಗ್ರೆಸ್‌ 17, ಬಿಜೆಪಿ 14 ಸ್ಥಾನ ಪಡೆದುಕೊಂಡಿದ್ದವು.

ADVERTISEMENT


ಶನಿವಾರ ಸಂಜೆಯೇ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಡಿ.1ರಂದು ಮೊದಲ ಹಂತದಲ್ಲಿ 89 ಕ್ಷೇತ್ರಗಳಲ್ಲಿ ಶೇ.63.31ರಷ್ಟು ಮತದಾನವಾಗಿದೆ. 2ನೇ ಹಂತದಲ್ಲಿ 61 ರಾಜಕೀಯ ಪಕ್ಷಗಳ 833 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಮತ್ತು ಅರವಿಂದ್‌ ಕೇಜ್ರಿವಾಲ್‌ ಅವರ ಆಮ್‌ ಆದ್ಮಿ ಪಕ್ಷ ಎಲ್ಲ 91 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಕಾಂಗ್ರೆಸ್‌ 90 ಕ್ಷೇತ್ರಗಳಲ್ಲಿ ಕಣದಲ್ಲಿದ್ದರೆ, ಅದರ ಮಿತ್ರ ಪಕ್ಷ ಎನ್‌ಸಿಪಿ 2 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.


ಅಹಮದಾಬಾದ್‌, ವಡೋದರ, ಗಾಂಧಿನಗರ ಮತ್ತು ಇತರ ಜಿಲ್ಲೆಗಳಲ್ಲಿ ಬಿರುಸಿನ ಸ್ಪರ್ಧೆಯಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ವಿರಂಗಮದಿಂದ ಕಣದಲ್ಲಿದ್ದಾರೆ. ಹಾರ್ದಿಕ್‌ ಪಟೇಲ್‌, ಅಲ್ಪೇಶ್‌ ಠಾಕೂರ್‌ , ಜಿಗ್ನೇಶ್‌ ಮೇವಾನಿ, ವಿಧಾನ ಸಭೆಯಲ್ಲಿ ವಿಪಕ್ಷ ನಾಯಕ ಸುಖ್‌ರಾಂ ರಥ್ವ ಸ್ಪರ್ಧೆಯಲ್ಲಿರುವ ಪ್ರಮುಖರು.


2ನೇ ಹಂತದಲ್ಲಿ 2.51 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಅದರಲ್ಲಿ 1.29 ಕೋಟಿ ಪುರುಷರು ಮತ್ತು 1.22 ಕೋಟಿ ಮಹಿಳಾ ಮತದಾರರು. 14,975 ಮತದಾನ ಕೇಂದ್ರಗಳಲ್ಲಿ ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.