ADVERTISEMENT

ಅಪರಿಚಿತ ವ್ಯಕ್ತಿಗಳಿಂದ ಗುಂಡಿನ ದಾಳಿ: ಐವರು ಸಾವು

ಉಲ್ಫಾ ಸಂಘಟನೆಯ ಕೈವಾಡ ಶಂಕೆ

ಪಿಟಿಐ
Published 2 ನವೆಂಬರ್ 2018, 12:08 IST
Last Updated 2 ನವೆಂಬರ್ 2018, 12:08 IST
ತಿನ್‌ಸುಕಿಯಾ ಜಿಲ್ಲೆಯಲ್ಲಿ ನಡೆದ ಅಮಾಯಕ ವ್ಯಕ್ತಿಗಳ ಹತ್ಯೆಯನ್ನು ಖಂಡಿಸಿ ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್‌ ಗೊಗೊಯಿ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು– ಪಿಟಿಐ ಚಿತ್ರ
ತಿನ್‌ಸುಕಿಯಾ ಜಿಲ್ಲೆಯಲ್ಲಿ ನಡೆದ ಅಮಾಯಕ ವ್ಯಕ್ತಿಗಳ ಹತ್ಯೆಯನ್ನು ಖಂಡಿಸಿ ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್‌ ಗೊಗೊಯಿ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು– ಪಿಟಿಐ ಚಿತ್ರ   

ಗುವಾಹಟಿ: ಅಸ್ಸಾಂನ ತಿನ್‌ಸುಕಿಯಾ ಜಿಲ್ಲೆಯ ಖೆರೋನಿಬರಿ ಎಂಬಲ್ಲಿ ಗುರುವಾರ ತಡರಾತ್ರಿ ಅಪರಿಚಿತ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ ಐದು ಮಂದಿ ಸಾವನ್ನ‍ಪ್ಪಿದ್ದಾರೆ. ಘಟನಾ ಸ್ಥಳದಿಂದ ಎ.ಕೆ–47 ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇಲ್ಲಿನಖೆರೋನಿಬರಿ ಗ್ರಾಮದ ಧೋಲಾ ಸಾದಿಯಾ ಸೇತುವೆ ಸಮೀಪದ ಅಂಗಡಿಯಲ್ಲಿ ಕೂತಿದ್ದ ಆರು ಮಂದಿಯನ್ನು ರಾತ್ರಿ 7.30ರಿಂದ 8 ಗಂಟೆ ಸುಮಾರಿಗೆ ಮುಸುಕುಧಾರಿಗಳು ಕರೆದೊಯ್ದಿದ್ದಾರೆ. ನಂತರ ಎಲ್ಲರನ್ನೂ ಸೇತುವೆ ಮೇಲೆ ಸಾಲಾಗಿ ನಿಲ್ಲಿಸಿ, ಅವರ ಬಳಿಯಿದ್ದ ಮೊಬೈಲ್‌, ನಗನಾಣ್ಯ ಪಡೆದು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಒಬ್ಬ ವ್ಯಕ್ತಿ ಸೇತುವೆಯಿಂದ ಕೆಳಗೆ ಬಿದ್ದು ಬದುಕುಳಿದಿದ್ದಾನೆ. ಆತನನ್ನು‌ ನಾಮಸುದ್ರಾ ಎಂದು ಗುರುತಿಸಲಾಗಿದೆ.

ಭಯದಿಂದ ಪ್ರಜ್ಞೆ ಕಳೆದುಕೊಂಡಿದ್ದ ಆತ ಶುಕ್ರವಾರ ಬೆಳಿಗ್ಗೆ ಎಚ್ಚರಗೊಂಡ ತಕ್ಷಣ, ಮನೆಗೆ ತೆರಳಿ ನಡೆದ ಘಟನೆಯನ್ನು ವಿವರಿಸಿದ್ದಾನೆ. ಈ ವೇಲೆ ಐದು ಮಂದಿ ಹತ್ಯೆಯಾದ ವಿಚಾರ ಬೆಳಕಿಗೆ ಬಂದಿದೆ.

ADVERTISEMENT

ಪೊಲೀಸರ ನಿರ್ಲಕ್ಷ್ಯ ಆರೋಪ: ಪೊಲೀಸರ ನಿರ್ಲಕ್ಷ್ಯದಿಂದ ಈ ದಾಳಿ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆ ನಡೆದ ಸ್ಥಳವು ಪೊಲೀಸ್‌ ಠಾಣೆಯಿಂದ 200 ಮೀಟರ್‌ ದೂರದಲ್ಲಿದೆ. ಬಂದೂಕುಧಾರಿಗಳು ಅಪಹರಣ ನಡೆಸಿದ್ದ ಕರೆಮಾಡಿದ್ದ ವೇಳೆ, ಪೊಲೀಸರು ತಮ್ಮ ಮೊಬೈಲ್‌ಗಳನ್ನು ಸ್ವಿಚ್‌ ಆಫ್‌ ಮಾಡಿಕೊಂಡಿದ್ದರು ಎಂದು ದೂರಿದ್ದಾರೆ.

ಕೂಬಿಂಗ್‌ ಕಾರ್ಯಾಚರಣೆ: ಡಿಜಿಪಿ ಕುಲಧರ್‌ ಸೈಕಿಯಾ ಹಾಗೂ ಹೆಚ್ಚುವರಿ ಡಿಜಿಪಿ ಮುಕೇಶ್‌ ಸ್ಥಳಕ್ಕೆ ಭೇಟಿ ನೀಡಿ ಕಾನೂನು–ಸುವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು.ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಕೂಬಿಂಗ್‌ ಕಾರ್ಯಾಚರಣೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.