ADVERTISEMENT

ಗುರುವಾಯೂರು ದೇವಾಲಯದ ವಿವಾದಿತ 'ಥಾರ್‌' ₹43 ಲಕ್ಷಕ್ಕೆ ಮರು ಹರಾಜು

ಪಿಟಿಐ
Published 6 ಜೂನ್ 2022, 15:13 IST
Last Updated 6 ಜೂನ್ 2022, 15:13 IST
ಮಹೀಂದ್ರಾ ಥಾರ್‌– ಸಂಗ್ರಹ ಚಿತ್ರ
ಮಹೀಂದ್ರಾ ಥಾರ್‌– ಸಂಗ್ರಹ ಚಿತ್ರ   

ತ್ರಿಶ್ಯೂರ್‌: ಗುರುವಾಯೂರಿನ ಪ್ರಸಿದ್ಧ ಶ್ರೀ ಕೃಷ್ಣ ದೇವಾಲಯವು ಮಹೀಂದ್ರಾ ಕಂಪನಿಯ ಕೆಂಪು ಬಣ್ಣದ 'ಥಾರ್‌' ಲಿಮಿಟೆಡ್‌ ಎಡಿಷನ್‌ ವಾಹನವನ್ನು ಮತ್ತೆ ಹರಾಜು ಹಾಕಿದ್ದು, ₹43 ಲಕ್ಷಕ್ಕೆ ಮಾರಾಟವಾಗಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಇದೇ ಥಾರ್‌ ಅನ್ನು ದೇವಾಲಯವು ಹರಾಜು ಹಾಕಿತ್ತು. ಆಗ ಬಹ್ರೇನ್‌ ಮೂಲದ ಮಲಯಾಳಿ ಅಮಲ್‌ ಮೊಹಮ್ಮದ್‌ ಅಲಿ ಎಂಬುವವರು ₹15.10 ಲಕ್ಷಕ್ಕೆ ಕೂಗುವ ಮೂಲಕ ಬಿಡ್‌ನಲ್ಲಿ ಗೆಲುವು ಪಡೆದಿದ್ದರು. ಆಗ ಅಲಿ ಒಬ್ಬರೇ ಬಿಡ್‌ ಸಲ್ಲಿಸಿದ್ದವರು. ಆದರೆ, ಅವರಿಗೆ ಥಾರ್‌ ಒಪ್ಪಿಸುವುದರ ಸಂಬಂಧ ವಿವಾದ ಸೃಷ್ಟಿಯಾಗಿತ್ತು ಹಾಗೂ ಪ್ರಕರಣವು ಕೋರ್ಟ್‌ ಮೆಟ್ಟಿಲೇರಿತ್ತು.

ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಲಿಮಟೆಡ್‌ ಎಡಿಷನ್‌ ಎಸ್‌ಯುವಿ (ಥಾರ್‌) ಅನ್ನು ತಮ್ಮದಾಗಿಸಿಕೊಳ್ಳಲು 15 ಜನರು ಬಿಡ್‌ ಸಲ್ಲಿಸಿದ್ದರು. ಜಿದ್ದಾಜಿದ್ದಿನ ಬಿಡ್‌ ₹43 ಲಕ್ಷದವರೆಗೂ ಮುಂದುವರಿಯಿತು. ಥಾರ್‌ಗೆ ₹15 ಲಕ್ಷ ಮೂಲ ಬೆಲೆ ನಿಗದಿಯಾಗಿತ್ತು.

ADVERTISEMENT

'ಬಿಡ್‌ ಮೊತ್ತ ಎಷ್ಟಾದರೂ ಸರಿಯೇ ವಾಹನವನ್ನು ತಮ್ಮದಾಗಿಸಿಕೊಳ್ಳುವಂತೆ ದುಬೈನಲ್ಲಿರುವ ಉದ್ಯಮಿ ವಿಗ್ನೇಶ್‌ ವಿಜಯಕುಮಾರ್‌ ತಮ್ಮ ಏಜೆಂಟರಿಗೆ ತಿಳಿಸಿದ್ದರು' ಎಂದು ವಿಗ್ನೇಶ್‌ ಅವರ ತಂದೆ ಟಿವಿ ಚಾನೆಲ್‌ವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ವಿಗ್ನೇಶ್‌ ತಮ್ಮ ಪಾಲಕರಿಗಾಗಿ ಥಾರ್‌ ಅನ್ನು ಗೆಲ್ಲಲು ಬಯಸಿದ್ದರು. ವಾಹನವನ್ನು ಮನೆಗೆ ತೆಗೆದುಕೊಂಡು ಹೋಗುವುದಕ್ಕೂ ಮುನ್ನ ನಿಗದಿತ ಜಿಎಸ್‌ಟಿ ಸಹ ಪಾವತಿಸಬೇಕಿದೆ.

ಈ ಹಿಂದಿನ ಹರಾಜಿನಲ್ಲಿ ಬಿಡ್‌ ಗೆದ್ದಿದ್ದ ಅಲಿ ಅವರಿಗೆ ಥಾರ್‌ ಒಪ್ಪಿಸಲು ಗುರುವಾಯೂರು ದೇವಸ್ಥಾನದ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆ ವಿಚಾರವು ಕೇರಳ ಹೈಕೋರ್ಟ್‌ ಮೆಟ್ಟಿಲೇರಿತ್ತು. ಆ ವಿಚಾರವನ್ನು ಸಾರ್ವಜನಿಕ ಸಮಕ್ಷಮದಲ್ಲಿಬಗೆಹರಿಸಿಕೊಳ್ಳಲುಕೋರ್ಟ್‌ ಸೂಚಿಸಿತ್ತು. ಅಲ್ಲಿ ವಾಹನವನ್ನು ಮತ್ತೆ ಹರಾಜು ಹಾಕುವ ನಿರ್ಧಾರಕ್ಕೆ ಬರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.