ADVERTISEMENT

ಗುವಾಹಟಿ – ಬಿಕನೇರ್‌ ರೈಲು ದುರಂತ: ಐವರು ಸಾವು, 45 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 15:16 IST
Last Updated 13 ಜನವರಿ 2022, 15:16 IST
ದುರಂತಕ್ಕೀಡಾದ ರೈಲು
ದುರಂತಕ್ಕೀಡಾದ ರೈಲು    

ಕೋಲ್ಕತ್ತ: ಗುವಾಹಟಿ – ಬಿಕನೇರ್‌ ನಡುವಿನ ಎಕ್ಸ್‌ಪ್ರೆಸ್‌ ರೈಲು (15633) ಪಶ್ಚಿಮ ಬಂಗಾಳದ ಜಲ್‌ಪೈಗುರಿ ಜಿಲ್ಲೆಯದೊಮೊಹಾನಿ ಬಳಿ ಹಳಿ ತಪ್ಪಿದೆ. ಘಟನೆಯಲ್ಲಿ ಐವರು ಸಾವಿಗೀಡಾಗಿದ್ದು, 45ಮಂದಿ ಗಾಯಗೊಂಡಿದ್ದಾರೆ ಎಂದು ಆರಂಭಿಕ ಮಾಹಿತಿಯಿಂದ ಗೊತ್ತಾಗಿದೆ.

ಇಂದು (ಜ. 13) ಸಂಜೆ ಐದು ಗಂಟೆಯಲ್ಲಿ ದುರ್ಘಟನೆ ಸಂಭವಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ರೈಲ್ವೆ ಇಲಾಖೆ, ‘ಸಂಜೆ ಐದು ಗಂಟೆಯಲ್ಲಿ ಅಪಘಾತ ಸಂಭವಿಸಿದೆ. 12 ಬೋಗಿಗಳು ಹಾನಿಗೀಡಾಗಿವೆ. ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳಲು ವೈದ್ಯಕೀಯ ತಂಡವನ್ನು ರವಾನಿಸಲಾಗಿದೆ’ಎಂದಿದೆ. ಈ ಸಂಬಂಧ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ADVERTISEMENT

‘ಹಠಾತ್ತನೇ ರೈಲು ಅಲುಗಾಡಿತು. ಅದರ ಬೆನ್ನಿಗೇ ಹಲವು ಬೋಗಿಗಳು ಉರುಳಿಬಿದ್ದವು. ಸಾವು ನೋವುಗಳು ಸಂಭವಿಸಿವೆ’ ಎಂದು ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರು ಹೇಳಿದ್ದಾರೆ.

ರೈಲು ದುರಂತ ಸಂಬಂಧ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

ಘಟನೆ ಬಗ್ಗೆ ಟ್ವೀಟ್‌ ಮಾಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ,‘ಗಾಯಗೊಂಡವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಡಿಎಂ, ಎಸ್‌ಪಿ, ಐಜಿರಕ್ಷಣೆ ಮತ್ತು ಪರಿಹಾರದಮೇಲ್ವಿಚಾರಣೆ ಮಾಡುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ದುರಂತದಲ್ಲಿ ಸಾವಿಗೀಡಾದವರ ಕುಟುಂಬಕ್ಕೆ ₹5 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ₹1 ಲಕ್ಷ, ಸಣ್ಣಪುಟ್ಟ ಗಾಯಗೊಂಡವರಿಗೆ ₹25 ಸಾವಿರಪರಿಹಾರ ನೀಡುವುದಾಗಿ ರೈಲ್ವೆ ಇಲಾಖೆ ಹೇಳಿದೆ.

ರೈಲ್ವೆ ಸಹಾಯವಾಣಿ ಸಂಖ್ಯೆಗಳು:03612731622, 03612731623

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.