ADVERTISEMENT

ಒಂದೇ ಗ್ರಾಮದ 3 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ, ಕೊಲೆ

ಶಂಕಿತ ಆರೋಪಿ ಮನೆಗೆ ಬೆಂಕಿ ಹಚ್ಚಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 20:02 IST
Last Updated 30 ಏಪ್ರಿಲ್ 2019, 20:02 IST
ಶಂಕಿತ ಆರೋಪಿಯ ಮನೆಗೆ ಬೆಂಕಿ ಹಚ್ಚಿದ ಗ್ರಾಮಸ್ಥರು
ಶಂಕಿತ ಆರೋಪಿಯ ಮನೆಗೆ ಬೆಂಕಿ ಹಚ್ಚಿದ ಗ್ರಾಮಸ್ಥರು   

ಹೈದರಾಬಾದ್‌: ಬಾವಿಯಲ್ಲಿ ಶವವೊಂದು ಪತ್ತೆಯಾಗುವ ಮೂಲಕ ಮೂವರು ಮುಗ್ಧ ಹೆಣ್ಣು ಮಕ್ಕಳ ಕೊಲೆ ಪ್ರಕರಣ ಕೊನೆಗೂ ಬಯಲಾಗಿದೆ. ಮಕ್ಕಳನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಆರೋಪಿ ಕೊಲೆ ಮಾಡಿ ಫಾರ್ಮ್‌ನಲ್ಲಿದ್ದ ಆಳವಾದ ಹಾಳು ಬಾವಿಯಲ್ಲಿ ಎಸೆದು ಪರಾರಿಯಾಗಿದ್ದಾನೆ.

ಮೃತ ಮೂವರು ವಿದ್ಯಾರ್ಥಿಗಳೂ ತೆಲಂಗಾಣ ಜಿಲ್ಲೆಯ ನಲಗೊಂಡ ಜಿಲ್ಲೆಯ ಹಾಜೀಪುರ ಗ್ರಾಮದ ಬೊಮ್ಮಲಾರಮರಂ ಬ್ಲಾಕ್‌ಗೆ ಸೇರಿದವರು.

ಕಳೆದ ಶುಕ್ರವಾರ ನಾಪತ್ತೆಯಾದ 9ನೇ ತರಗತಿಯ ಬಾಲಕಿ ಶರಾವತಿಯ(ಹೆಸರು ಬದಲಾಯಿಸಲಾಗಿದೆ) ಶೋಧ ಕಾರ್ಯದಲ್ಲಿ ಪೊಲೀಸರು ತೊಡಗಿದ್ದರು. ವಿಶೇಷ ತರಗತಿ ಇದ್ದರಿಂದ ಈ ಬಾಲಕಿಯು ತನ್ನ ಇಬ್ಬರು ಸಹಪಾಠಿಗಳೊಂದಿಗೆ ಐದು ಕಿ.ಮೀಟರ್‌ ದೂರ ನಡೆದುಕೊಂಡೇ ಹೋಗಿದ್ದರು. ಆದರೆ, ಆಕೆ ಮನೆಗೆ ವಾಪಸ್ ಆಗಲಿಲ್ಲ.

ADVERTISEMENT

ಶೋಧ ಕಾರ್ಯದಲ್ಲಿ ನಿರತವಾಗಿದ್ದ ಪೊಲೀಸರಿಗೆ ಆಳವಾದ ಬಾವಿಯ ಬಳಿ ಆಕೆಯ ಶಾಲಾ ಬ್ಯಾಗ್‌ ಪತ್ತೆಯಾಗಿತ್ತು. ಹಾಜೀಪುರ ಗ್ರಾಮಸ್ಥರ ಒತ್ತಾಯದಿಂದ ಬಾವಿಗೆ ಇಳಿದು ನೋಡಿದಾಗ ಬಾಲಕಿಯ ಶವ ಅಲ್ಲಿತ್ತು. ಆಕೆ ಮೇಲೆ ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಮಾರಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂತು.

ಮಾರ್ಚ್‌ 15ರಂದು ನಾಪತ್ತೆಯಾಗಿದ್ದ ಅದೇ ಗ್ರಾಮದ ಮತ್ತೊಬ್ಬ ಪದವಿ ವಿದ್ಯಾರ್ಥಿನಿ ತಿಪ್ರಾಬೊನೈ ಮನಿಷಾ ಎಂಬ ಬಾಲಕಿಯ ಅವಶೇಷಗಳು ಅದೇ ಬಾವಿಯಲ್ಲಿ ಪತ್ತೆಯಾಗಿದ್ದವು. ಆಕೆಯ ಶಾಲಾ ಬ್ಯಾಗ್‌ನಲ್ಲಿದ್ದ ಆಧಾರ್‌ ಕಾರ್ಡ್‌ನಿಂದ ಗುರುತು ಪತ್ತೆಯಾಗಿತ್ತು. ಮನಿಷಾ ಶವ ಪತ್ತೆಯಾದ ನಂತರ ಮಾದಕ ವ್ಯಸನಿ ಮಾರಿ ಶ್ರೀನಿವಾಸ ರೆಡ್ಡಿ (28) ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸಿದ್ದರು.

ಇದರ ಬೆನ್ನಲ್ಲೇ ಪಕ್ಕದ ಮೈಶ್ರೀರೆಡ್ಡಿಪಾಳ್ಯದ ಹಳ್ಳಿಯೊಂದರಿಂದ 2015ರಂದು ನಾಪತ್ತೆಯಾದ 12 ವರ್ಷದ ತುಂಗಾನಿ ಕಲ್ಯಾಣಿ (12) ಎಂಬ ಬಾಲಕಿ ಪ್ರಕರಣ ಬಯಲಿಗೆ ಬಂದಿತ್ತು. ಹಾಜೀಪುರದಿಂದ ಚಿಕ್ಕಮ್ಮನ ಮನೆಗೆ ಹೋಗಿದ್ದ ಕಲ್ಯಾಣಿ ನಾಪತ್ತೆಯಾಗಿದ್ದಳು. ಇಬ್ಬರು ಬಾಲಕಿಯರ ರೀತಿಯಲ್ಲಿಯೇ ಈಕೆಯೂ ಸಾವನ್ನಪ್ಪಿರುವ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿತ್ತು.

ಈ ಬೆಳವಣಿಗೆಯ ಮಧ್ಯೆಯೇ ಹಾಜೀಪುರದಲ್ಲಿ ಶ್ರೀನಿವಾಸ್‌ ರೆಡ್ಡಿ ಮನೆಗೆ ಬೆಂಕಿ ಹಚ್ಚಿದ ಗ್ರಾಮಸ್ಥರು ಆತನ ವಿರುದ್ಧ ಎನ್‌ಕೌಂಟರ್ ಮಾಡಬೇಕು ಎಂದು ಆಗ್ರಹಿಸಿದರು. ರೆಡ್ಡಿ ಕುಟುಂಬ ರಕ್ಷಿಸಿದ ಪೊಲೀಸರು ತಮ್ಮ ವಾಹನದಲ್ಲಿ ಆತನನ್ನು ಕರೆದೊಯ್ದರು.

ಈ ಕುರಿತು ಮಾತನಾಡಿದ ಉಪ ಪೊಲೀಸ್ ಆಯುಕ್ತರಾದ ಬೋಂಗಿರ್‌ ಹಾಗೂ ನಾರಾಯಣ ರೆಡ್ಡಿ ಅವರು ಪ್ರಕರಣದ ಸಂಬಂಧ ಹಲವರ ವಿಚಾರಣೆ ನಡೆಸಲಾಗಿದೆ. ಆರೋಪಿಯನ್ನು ಶೀಘ್ರವೇ ಬಂಧಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.