ಮುಂಬೈ: ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐಗೆಭಾರತದ ಯುದ್ಧ ವಿಮಾನಗಳ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ.(ಎಚ್‌ಎಎಲ್) ಸಿಬ್ಬಂದಿಯೊಬ್ಬರನ್ನು ಬಂಧಿಸಿರುವುದಾಗಿ ಮಹಾರಾಷ್ಟ್ರ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
‘41 ವರ್ಷದ ಈ ವ್ಯಕ್ತಿ, ಭಾರತದ ಯುದ್ಧ ವಿಮಾನಗಳು ಹಾಗೂ ಅವುಗಳ ನಿರ್ಮಾಣ ಘಟಕಗಳ ಕುರಿತ ರಹಸ್ಯ ಮಾಹಿತಿಗಳನ್ನು ಐಎಸ್‌ಐಗೆ ನೀಡುತ್ತಿದ್ದರು’ ಎಂದು ಪ‍್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಐಎಸ್‌ಐ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ಈ ವ್ಯಕ್ತಿಯ ಬಗ್ಗೆ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ನಾಸಿಕ್ ಘಟಕವು ನಿಖರವಾದ ಮಾಹಿತಿಯನ್ನು ಸಂಗ್ರಹಿಸಿತ್ತು ಎಂದು ತಿಳಿಸಲಾಗಿದೆ.
‘ಯುದ್ಧ ವಿಮಾನಗಳ ರಹಸ್ಯ ಮಾಹಿತಿಯ ಜೊತೆಗೆ ನಾಸಿಕ್‌ನ ಸಮೀಪ ಓಜರ್‌ನಲ್ಲಿರುವ ಎಚ್‌ಎಎಲ್‌ನ ಯುದ್ಧ ವಿಮಾನ ನಿರ್ಮಾಣ ಘಟಕ ಹಾಗೂ ವಾಯುನೆಲೆ ಕುರಿತು ಮಾಹಿತಿಯನ್ನು ನೀಡುತ್ತಿದ್ದರು. ನಾಸಿಕ್‌ನಲ್ಲಿರುವ ಅವರ ಮನೆಯಿಂದಲೇ ಎಟಿಎಸ್ ಸಿಬ್ಬಂದಿ ಅವರನ್ನು ಬಂಧಿಸಿದ್ದಾರೆ. ಮೂರು ಮೊಬೈಲ್‌ಗಳು, ಐದು ಸಿಮ್‌ಕಾರ್ಡ್ ಹಾಗೂ ಎರಡು ಮೆಮೊರಿ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ಇವುಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಆರೋಪಿಯನ್ನು ನ್ಯಾಯಾಲಯದ ಮುಂದೆ ಶುಕ್ರವಾರ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ 10 ದಿನ ಎಟಿಎಸ್ ಕಸ್ಟಡಿಗೆ ನೀಡಲು ನ್ಯಾಯಾಲಯವು ಆದೇಶಿಸಿದೆ.
1964ರಲ್ಲಿ ಸ್ಥಾಪನೆ:ಮಿಗ್–21ಎಫ್‌ಎಲ್ ಯುದ್ಧ ವಿಮಾನ ಹಾಗೂ ಕೆ–13 ಕ್ಷಿಪಣಿಗಳತಯಾರಿಗೆ1964ರಲ್ಲಿ ನಾಸಿಕ್‌ನಲ್ಲಿ ಎಚ್‌ಎಎಲ್ ಏರ್‌ಕ್ರಾಫ್ಸ್ ವಿಭಾಗವನ್ನು ಸ್ಥಾಪಿಸಲಾಗಿತ್ತು. ಈ ವಾಯುನೆಲೆಯು ನಾಸಿಕ್‌ನಿಂದ 24 ಕಿ.ಮೀ ದೂರದಲ್ಲಿರುವ ಓಜರ್‌ನಲ್ಲಿದೆ.
ಈ ಘಟಕದಲ್ಲಿ ಮಿಗ್–21ಎಂ, ಮಿಗ್–21 ಬೈಸನ್, ಮಿಗ್–27ಎಂ ಹಾಗೂ ಅತ್ಯಾಧುನಿಕ ಸುಕೋಯಿ–30ಎಂಕೆಐ ಯುದ್ಧ ವಿಮಾನಗಳನ್ನು ತಯಾರಿಸಲಾಗಿದೆ. ಇದೇ ಘಟಕವು ಈ ಯುದ್ಧ ವಿಮಾನಗಳ ನಿರ್ವಹಣೆಯನ್ನೂ ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.