
ನವದೆಹಲಿ: ಮಾಂಸಹಾರಿ ಪ‍್ರಯಾಣಿಕರಿಗೆ ರೈಲುಗಳಲ್ಲಿ ಸಂಸ್ಕರಿಸಿದ ಹಲಾಲ್ ಮಾಂಸವನ್ನು ಮಾತ್ರ ನೀಡಲಾಗುತ್ತಿದೆ. ಈ ಮೂಲಕ ತಾರತಮ್ಯ ಎಸಗುವ ಜತೆಗೆ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಭಾರತೀಯ ರೈಲ್ವೆಗೆ ನೋಟಿಸ್ ಜಾರಿಗೊಳಿಸಿದೆ.
ರೈಲುಗಳಲ್ಲಿ ನೀಡಲಾಗುತ್ತಿರುವ ಹಲಾಲ್ ಮಾಂಸದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಭೋಪಾಲ್‌ನ ಸುನಿಲ್ ಅಹಿರ್ವರ್ ಎಂಬವರು ಮಾನವ ಹಕ್ಕುಗಳ ಸಂರಕ್ಷಣಾ ಕಾಯ್ದೆ–1993ರ ಸೆಕ್ಷನ್ 12ರ ಅನ್ವಯ ದೂರು ಸಲ್ಲಿಸಿದ್ದರು.
‘ರೈಲುಗಳಲ್ಲಿ ಹಲಾಲ್ ಮಾಂಸವನ್ನು ಮಾತ್ರವೇ ನೀಡಲಾಗುತ್ತಿದೆ. ಇದರಿಂದ ಹಿಂದೂ ಹಾಗೂ ಸಿಖ್ ಧರ್ಮದ ಮಾಂಸಹಾರಿ ಪ್ರಯಾಣಿಕರಿಗೆ ತಮ್ಮ ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾದ ಆಹಾರ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಮೂಲಕ ಪ್ರಯಾಣಿಕನ ಆಯ್ಕೆ ಹಕ್ಕು, ಘನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದೊಂದಿಗೆ ಬದುಕುವ ಹಕ್ಕನ್ನು ಉಲ್ಲಂಘಿಸಲಾಗುತ್ತಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಅಲ್ಲದೇ, ‘ ರೈಲಿನಲ್ಲಿ ಅನುಸರಿಸುತ್ತಿರುವ ಹಲಾಲ್ ಮಾಂಸದ ಪದ್ಧತಿಯಿಂದಾಗಿ ಮಾಂಸ ವ್ಯಾಪಾರದಲ್ಲೇ ಬದುಕು ರೂಪಿಸಿಕೊಂಡಿರುವ ಹಿಂದೂ ದಲಿತ ಸಮುದಾಯವನ್ನು ವ್ಯಾಪಾರದಿಂದ ಹೊರಗಿಟ್ಟು ಅವರ ಜೀವನೋಪಾಯದ ಹಕ್ಕುಗಳನ್ನೂ ಕಸಿಯಲಾಗುತ್ತಿದೆ’ ಎಂದೂ ಸುನಿಲ್ ದೂರಿದ್ದರು.
ಎನ್‌ಎಚ್‌ಆರ್‌ಸಿಯ ಸದಸ್ಯ ಪ್ರಿಯಾಂಕ್ ಕಾನೂಂಗೊ ಅಧ್ಯಕ್ಷತೆಯ ಪೀಠವು ಸುನಿಲ್ ಅವರ ದೂರನ್ನು ಪರಿಗಣಿಸಿ, ಇದಕ್ಕೆ ಸಂಬಂಧಿಸಿದಂತೆ ಭಾರತೀಯ ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. ದೂರುಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ, ಕೈಗೊಂಡಿರುವ ಕ್ರಮಗಳ ಬಗ್ಗೆ ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆಯೂ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.