ADVERTISEMENT

ಹಲ್ದ್ವಾನಿ ಹಿಂಸಾಚಾರದ ಮಾಸ್ಟರ್ ಮೈಂಡ್ ಅಬ್ದುಲ್ ಮಲಿಕ್‌ ಬಂಧನ

ಡೆಕ್ಕನ್ ಹೆರಾಲ್ಡ್
Published 11 ಫೆಬ್ರುವರಿ 2024, 12:53 IST
Last Updated 11 ಫೆಬ್ರುವರಿ 2024, 12:53 IST
<div class="paragraphs"><p>ಹಿಂಸಾಚಾರದ ಬಳಿಕ&nbsp;ಬನ್‌ಭೂಲ್‌ಪುರದಲ್ಲಿ ನಿಯೋಜಿಸಲಾದ&nbsp;ಪೊಲೀಸ್ ಸಿಬ್ಬಂದಿ </p></div>

ಹಿಂಸಾಚಾರದ ಬಳಿಕ ಬನ್‌ಭೂಲ್‌ಪುರದಲ್ಲಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿ

   

(ಚಿತ್ರ ಕೃಪೆ–ಪಿಟಿಐ) 

ಲಖನೌ: ಉತ್ತರಾಖಂಡದ ಹಲ್ದ್ವಾನಿ ಪಟ್ಟಣದಲ್ಲಿ ಗುರುವಾರ ನಡೆದ ಹಿಂಸಾಚಾರದ ಮಾಸ್ಟರ್ ಮೈಂಡ್ ಎನ್ನಲಾದ ಅಬ್ದುಲ್ ಮಲಿಕ್‌ನನ್ನು ಉತ್ತರಾಖಂಡ ಪೊಲೀಸರು ಭಾನುವಾರ ದೆಹಲಿಯಲ್ಲಿ ಬಂಧಿಸಿದ್ದಾರೆ.

ADVERTISEMENT

ಹಲ್ದ್ವಾನಿಯಲ್ಲಿ ಅಕ್ರಮವಾಗಿ ಕಟ್ಟಲಾಗಿದ್ದ ಮದರಸಾ ಮತ್ತು ಮಸೀದಿಯನ್ನು ಬುಲ್ಡೋಜರ್‌ನಿಂದ ತೆರವುಗೊಳಿಸಿದ ಬೆನ್ನೆಲ್ಲೇ ಹಿಂಸಾಚಾರ ಭುಗಿಲೆದ್ದಿತ್ತು. ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.

ಹಿಂಸಾಚಾರ ಭುಗಿಲೆದ್ದ ನಂತರ ತಲೆಮರೆಸಿಕೊಂಡಿದ್ದ ಅಬ್ದುಲ್ ಮಲಿಕ್‌ನನ್ನು ಉತ್ತರಾಖಂಡ ಮತ್ತು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಳಿಕ ಹಲ್ದ್ವಾನಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಲಿಕ್, ಮದರಸಾ ಮತ್ತು ಮಸೀದಿ ಇದ್ದ ಜಾಗದ ‌ಮಾಲೀಕ ಎನ್ನಲಾಗಿದೆ. ಸರ್ಕಾರಿ ಜಮೀನನ್ನು ಅಕ್ರಮವಾಗಿ ಖರೀದಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಲಿಕ್ ‌‌ಉತ್ತರಾಖಂಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಕಟ್ಟಡಗಳನ್ನು(ಮದರಸಾ ಮತ್ತು ಮಸೀದಿ) ತೆರವುಗೊಳಿಸಲು ನೀಡಿದ ಆದೇಶವನ್ನು ರದ್ದುಗೊಳಿಸುವಂತೆ ಕೋರಿದ್ದರು.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈವರೆಗೆ 60 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರಲ್ಲಿ ಒಬ್ಬರು ಸ್ಥಳೀಯ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕನ ಸಹೋದರ ಎಂದು ಹೇಳಲಾಗಿದೆ.

ಇಂಟರ್‌ನೆಟ್ ಸೇವೆ ಪುನರಾರಂಭ

ನಗರದಲ್ಲಿ ನಾಲ್ಕು ದಿನಗಳ ಕಾಲ ಸ್ಥಗಿತಗೊಂಡಿದ್ದ ಇಂಟರ್‌ನೆಟ್ ಸೇವೆಯನ್ನು ಪುನರಾರಂಭ ಮಾಡಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಯಾರಾದರೂ ಪ್ರಚೋದನಕಾರಿ ಪೋಸ್ಟ್‌ಗಳು, ಕಾಮೆಂಟ್‌ಗಳು ಅಥವಾ ವಿಡಿಯೊಗಳನ್ನು ಪೋಸ್ಟ್ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ರಾಜ್ಯ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಹಿಂಸಾಚಾರದ ಕೇಂದ್ರಬಿಂದುವಾಗಿದ್ದ ಬನ್‌ಭೂಲ್‌ಪುರ ಪ್ರದೇಶವನ್ನು ಹೊರತುಪಡಿಸಿ ಉಳಿದೆಡೆ ಕರ್ಫ್ಯೂ ತೆರವುಗೊಳಿಸಲಾಗಿದೆ. ಬನ್‌ಭೂಲ್‌ಪುರ ಹಾಗೂ ಇತರ ಸೂಕ್ಷ್ಮ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಭಾನುವಾರ ಪಟ್ಟಣದಲ್ಲಿ ಎಲ್ಲಿಯೂ ಅಹಿತಕರ ಘಟನೆಗಳು ವರದಿಯಾಗಿಲ್ಲ.

ಹಿಂಸಾಚಾರದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ರಾಜ್ಯ ಸರ್ಕಾರ ಶನಿವಾರ ಆದೇಶಿಸಿದೆ. ಕಮಿಷನರ್ ದೀಪಕ್ ರಾವತ್ ಅವರು ಹಿಂಸಾಚಾರದ ಬಗ್ಗೆ ತನಿಖೆ ನಡೆಸಿ 15 ದಿನಗಳಲ್ಲಿ ಸರ್ಕಾರಕ್ಕೆ ತಮ್ಮ ವರದಿಯನ್ನು ಸಲ್ಲಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.