ADVERTISEMENT

ಹಿಂದು ಧರ್ಮಕ್ಕೆ ಧಕ್ಕೆ ತರಲು ಕಾಂಗ್ರೆಸ್‌ನಿಂದ ಯತ್ನ: ಹಾರ್ದಿಕ್ ಪಟೇಲ್ ಆರೋಪ

ಐಎಎನ್ಎಸ್
Published 25 ಮೇ 2022, 4:23 IST
Last Updated 25 ಮೇ 2022, 4:23 IST
ಹಾರ್ದಿಕ್ ಪಟೇಲ್ – ಪಿಟಿಐ ಚಿತ್ರ
ಹಾರ್ದಿಕ್ ಪಟೇಲ್ – ಪಿಟಿಐ ಚಿತ್ರ   

ಅಹಮದಾಬಾದ್: ಹಿಂದು ಧರ್ಮಕ್ಕೆ ಧಕ್ಕೆ ತರಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಹಾರ್ದಿಕ್ ಪಟೇಲ್ ಟೀಕಿಸಿದ್ದಾರೆ. ಇತ್ತೀಚೆಗಷ್ಟೇ ಅವರು ಕಾಂಗ್ರೆಸ್ ಪಕ್ಷ ತ್ಯಜಿಸಿದ್ದರು.

ಕಾಂಗ್ರೆಸ್ ನಾಯಕ ಭರತ್‌ಸಿಂಗ್ ಸೋಲಂಕಿ ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ನೀಡಿದ್ದಾರೆ ಎನ್ನಲಾದ ಆಕ್ಷೇಪಾರ್ಹ ಹೇಳಿಕೆಗೆ ತಿರುಗೇಟು ನೀಡಿ ಟ್ವೀಟ್ ಮಾಡಿರುವ ಹಾರ್ದಿಕ್ ಪಟೇಲ್, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

'ಕಾಂಗ್ರೆಸ್ ಪಕ್ಷವು ಜನರ ಭಾವನೆಗಳಿಗೆ ಮತ್ತು ಹಿಂದು ಧರ್ಮದ ನಂಬಿಕೆಗೆ ಧಕ್ಕೆ ತರುವ ಕೆಲಸ ಮಾಡುತ್ತದೆ ಎಂದು ನಾನು ಈ ಹಿಂದೆಯೂ ಹೇಳಿದ್ದೆ. ರಾಮ ಮಂದಿರದ ಇಟ್ಟಿಗೆ ಮೇಲೆ ನಾಯಿ ಮೂತ್ರ ಮಾಡುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಗುಜರಾತ್ ಕಾಂಗ್ರೆಸ್ ನಾಯಕ ಹೇಳಿಕೆ ನೀಡಿದ್ದಾರೆ!’ ಎಂದು ಟ್ವೀಟ್‌ನಲ್ಲಿ ಹಾರ್ದಿಕ್ ಉಲ್ಲೇಖಿಸಿದ್ದಾರೆ.

‘ಭಗವಾನ್ ಶ್ರೀರಾಮನೊಂದಿಗೆ ನಿಮಗೆ ಯಾವ ದ್ವೇಷವಿದೆ ಎಂದು ಕಾಂಗ್ರೆಸ್ ಮತ್ತು ಅದರ ನಾಯಕರನ್ನು ಕೇಳಲು ಬಯಸುತ್ತೇನೆ? ಹಿಂದುಗಳನ್ನು ನೀವು ಇಷ್ಟು ದ್ವೇಷಿಸುವುದೇಕೆ? ಶತಮಾನಗಳ ನಂತರ, ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಿಸಲಾಗುತ್ತಿದೆ. ಆದರೂ ಕಾಂಗ್ರೆಸ್ ನಾಯಕರು ಶ್ರೀರಾಮನ ವಿರುದ್ಧ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಹಮದಾಬಾದ್‌ನಲ್ಲಿ ಒಬಿಸಿ ಸಭೆ ಉದ್ದೇಶಿಸಿ ಮಾತನಾಡಿದ್ದ ಸೋಲಂಕಿ, ‘ಬಿಜೆಪಿ ರಾಮನ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುತ್ತಿದೆ. ಲಕ್ಷಾಂತರ ಹಿಂದುಗಳ ಭಾವನೆಯೊಂದಿಗೆ ಆಟವಾಡಿದೆ. 80ರ ದಶಕದ ಉತ್ತರಾರ್ಧದಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಜನರು ಶಿಲೆಗಾಗಿ ಬಹಳ ಗೌರವದಿಂದ ದೇಣಿಗೆ ನೀಡಿದ್ದರು. ಆದರೆ ಅವರು ಶಿಲೆಯನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಅಯೋಧ್ಯೆಯಲ್ಲಿ ಶಿಲೆಯ ಮೇಲೆ ನಾಯಿಗಳು ಮೂತ್ರ ಮಾಡುವುದು ಕಂಡುಬಂದಿದೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.