ADVERTISEMENT

ದುರ್ಗಾ ಪೂಜೆ: ಸಮಿತಿಗಳಿಂದ ಕೋವಿಡ್‌ ವಾರಿಯರ್ಸ್‌ಗೆ ಗೌರವ

ಪಿಟಿಐ
Published 18 ಅಕ್ಟೋಬರ್ 2020, 8:11 IST
Last Updated 18 ಅಕ್ಟೋಬರ್ 2020, 8:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳದ ಹಲವು ದುರ್ಗಾ ಪೂಜಾ ಸಮಿತಿಗಳು ಅ.22 ರಂದು ಆರಂಭವಾಗುವ ಐದು ದಿನಗಳ ಉತ್ಸವಕ್ಕಾಗಿ ಕೋವಿಡ್‌ ಸಂಬಂಧಿತ ವಿಷಯಗಳನ್ನು ಥೀಮ್‌ಗಳನ್ನಾಗಿ ಆರಿಸಿಕೊಂಡಿವೆ.

ಕೆಲವು ಸಮಿತಿಗಳು, ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು ಎದುರಿಸಿದ ಸಮಸ್ಯೆಗಳನ್ನು ಥೀಮ್‌ ಮೂಲಕ ಎತ್ತಿ ಹಿಡಿದಿದ್ದರೆ, ಇನ್ನು ಕೆಲವು ಸಮಿತಿಗಳು ಕೋವಿಡ್‌ ವಾರಿಯರ್ಸ್‌ಗಳಿಗೆ ಗೌರವವನ್ನು ಸಲ್ಲಿಸಿವೆ. ಇನ್ನೂ ಹಲವರು ಕೊರೊನ ಸೋಂಕನ್ನು ಮಹಿಷಾಸುರನಿಗೆ ಹೋಲಿಸಿ , ದೇವಿ ಸೋಂಕನ್ನು ಶಮನ ಮಾಡುತ್ತಾಳೆ ಎಂಬ ಸಂದೇಶವನ್ನು ಥೀಮ್‌ ಮೂಲಕ ಹೇಳಿದ್ದಾರೆ.

ಕೊರೊನಾ ಸೋಂಕಿನಿಂದ ಈ ಬಾರಿಯ ಉತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲಾಗುತ್ತಿದೆ.

ADVERTISEMENT

ಬಾರಿಷ್‌ ಪೂಜಾ ಸಮಿತಿಯು ಮಡಿಲಿನಲ್ಲಿ ಮಗು ಹಿಡಿದು, ಎರಡು ಮಕ್ಕಳೊಂದಿಗೆ ರಸ್ತೆಯಲ್ಲಿ ಸಾಗುತ್ತಿರುವ ತಾಯಿಯ ಮೂರ್ತಿಯನ್ನು ರಚಿಸಿದೆ. ಈ ಮೂಲಕ ಲಾಕ್‌ಡೌನ್‌ನಲ್ಲಿ ವಲಸೆ ಕಾರ್ಮಿಕರು ಎದುರಿಸಿದ ಸಮಸ್ಯೆಯನ್ನು ಹೇಳುವ ಪ್ರಯತ್ನವನ್ನು ಸಮಿತಿಯು ಮಾಡಿದೆ.

‘ಅವರು ನಮ್ಮ ದುರ್ಗಾ ಮಾತೆ. ಅವರ ಎಂಟು ಕೈಗಳು, ವಲಸೆ ಕಾರ್ಮಿಕರು ಅನುಭವಿಸಿದ ನೋವು, ತೊಂದರೆಗಳನ್ನು ಪ್ರತಿಬಿಂಬಿಸುತ್ತದೆ. ವ್ಯಾಪಾರ ವ್ಯವಹಾರಗಳು, ರಸ್ತೆ ಸಾರಿಗೆಗಳು ಸ್ಥಗಿತಗೊಂಡ ಸಂದರ್ಭದಲ್ಲಿ ಬೇರೆ ದಾರಿಯಿಲ್ಲದೆ ಹಲವು ಕಾರ್ಮಿಕರು ಮನೆಗಳಿಗೆ ನಡೆದುಕೊಂಡೇ ಸಾಗಿದರು. ವಲಸೆ ಕಾರ್ಮಿಕರು ನೋವಿನಿಂದ ಕುಸಿದರೂ, ತಮ್ಮೆಲ್ಲ ಧೈರ್ಯವನ್ನು ಒಗ್ಗೂಡಿಸಿ ಮತ್ತೆ ಮೇಲೇಳಲು ಪ್ರಯತ್ನಿಸುತ್ತಿದ್ದಾರೆ. ಇದು ಅವರಿಗಾಗಿ ನಮ್ಮ ಗೌರವ’ ಎಂದು ಸಮಿತಿಯ ವಕ್ತಾರರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.