ADVERTISEMENT

ರೈತ ಕಲ್ಯಾಣ ಕ್ರಮಗಳ ಪಟ್ಟಿ ತೋರಿಸಿ: ಪಂಜಾಬ್ ಮುಖ್ಯಮಂತ್ರಿಗೆ ಹರಿಯಾಣ ಸಿಎಂ ಸವಾಲು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 15:16 IST
Last Updated 31 ಆಗಸ್ಟ್ 2021, 15:16 IST
ಮನೋಹರ್ ಲಾಲ್ ಖಟ್ಟರ್, ಅಮರೀಂದರ್‌ ಸಿಂಗ್‌
ಮನೋಹರ್ ಲಾಲ್ ಖಟ್ಟರ್, ಅಮರೀಂದರ್‌ ಸಿಂಗ್‌   

ನವದೆಹಲಿ: ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರಿಗೆ ಧೈರ್ಯವಿದ್ದರೆ ತಾವು ರೈತರ ಕಲ್ಯಾಣಕ್ಕಾಗಿ ಕೈಗೊಂಡ ಕ್ರಮಗಳನ್ನು ಪಟ್ಟಿ ಮಾಡಿ ತೋರಿಸಲಿ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸವಾಲು ಹಾಕಿದರು.

ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತ ಪ್ರತಿಭಟನೆಗಳನ್ನು ಬೆಂಬಲಿಸಿ ಅಮರಿಂದರ್‌ ಸಿಂಗ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವುದಕ್ಕೆ ಪ್ರತಿಕ್ರಿಯಿಸಿರುವ ಖಟ್ಟರ್, ರೈತರ ಪ್ರತಿಭಟನೆಯ ನಂತರವೇ ಪಂಜಾಬ್ ಸರ್ಕಾರ ಕಬ್ಬಿನ ಬೆಲೆ ಹೆಚ್ಚಿಸಿದೆ ಎಂದು ಟೀಕಿಸಿದರು.

‘ಪ್ರಿಯ ಅಮರಿಂದರ್ ಜೀ, ಹರಿಯಾಣವು ಭತ್ತ, ಗೋಧಿ, ಸಾಸಿವೆ, ಬಾಜ್ರಾ, ಬೇಳೆ, ಹೆಸರು, ಮುಸುಕಿನ ಜೋಳ, ನೆಲಗಡಲೆ, ಸೂರ್ಯಕಾಂತಿ, ಹತ್ತಿ ಸೇರಿ 10 ಬೆಳೆಗಳ ಉತ್ಪನ್ನಗಳನ್ನು ಎಂಎಸ್‌ಪಿಯಲ್ಲಿ ಖರೀದಿಸುತ್ತಿದೆ. ರೈತರ ಖಾತೆಗೆ ನೇರವಾಗಿ ಹಣ ಪಾವತಿಸುತ್ತಿದೆ. ಪಂಜಾಬ್ ಎಂಎಸ್‌ಪಿಯಲ್ಲಿ ಎಷ್ಟು ಉತ್ಪನ್ನಗಳನ್ನು ರೈತರಿಂದ ಖರೀದಿಸುತ್ತಿದೆ ಹೇಳಿ’ ಎಂದು ಖಟ್ಟರ್ ಪ್ರಶ್ನಿಸಿದರು.

‘ಹರಿಯಾಣ ಕಳೆದ 7 ವರ್ಷಗಳಿಂದ ಕಬ್ಬಿಗೆ ದೇಶದಲ್ಲೇ ಅತಿ ಹೆಚ್ಚು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಪಾವತಿಸುತ್ತಿದೆ. ಭತ್ತ ಬೆಳೆಯುವುದನ್ನು ಕೈಬಿಡುವ ಪ್ರತಿ ರೈತರಿಗೆ ಎಕರೆಗೆ ₹ 7,000 ಪ್ರೋತ್ಸಾಹಧನ ನೀಡುತ್ತಿದೆ. ಪಂಜಾಬ್ ಇದೇ ರೀತಿ ರೈತನಿಗೆ ನೀಡುತ್ತಿರುವ ಪ್ರೋತ್ಸಾಹ ಏನು?’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಅಮರಿಂದರ್ ಜೀ ಯಾರು ರೈತ ವಿರೋಧಿ? ಪಂಜಾಬ್ ಅಥವಾ ಹರಿಯಾಣ’ ಎಂದು ಪ್ರಶ್ನಿಸಿರುವ ಖಟ್ಟರ್‌, ತಮ್ಮ ಸರ್ಕಾರ ಕೈಗೊಂಡಿರುವ ರೈತ ಕಲ್ಯಾಣದ ಸರಣಿ ಕ್ರಮಗಳನ್ನು ಟ್ವಟರ್‌ನಲ್ಲಿ ಪಟ್ಟಿ ಮಾಡಿದ್ದಾರೆ.

ಕಳೆದ ವಾರ, ಕಬ್ಬು ಬೆಳೆಗಾರರ ಪ್ರತಿಭಟನೆಯ ನಂತರ 2021-22ರ ಸಾಲಿಗೆ ಕಬ್ಬು ಅರೆಯುವಿಕೆ ಋತುವಿನಲ್ಲಿ ಎಲ್ಲ ತಳಿಯ ಕಬ್ಬಿಗೆ ರಾಜ್ಯ ಒಪ್ಪಿದ ಬೆಲೆಯಲ್ಲಿ (ಎಸ್‌ಎಪಿ) ಪ್ರತಿ ಕ್ವಿಂಟಲ್‌ಗೆ ₹15 ಹೆಚ್ಚಳಕ್ಕೆ ಸಿಂಗ್ ಅನುಮೋದನೆ ನೀಡಿದ್ದಾರೆ.

ಇದನ್ನೂ ಓದಿ:

ಇಬ್ಬರ ನಡುವೆ ವಾಕ್ಸಮರ:ಹರಿಯಾಣದ ಕರ್ನಾಲ್‌ನಲ್ಲಿ ಶನಿವಾರ ಪ್ರತಿಭಟನಾ ನಿರತ ರೈತರ ವಿರುದ್ಧದ ಪೊಲೀಸರ ಕ್ರಮದ ಬಗ್ಗೆ ಇಬ್ಬರು ಮುಖ್ಯಮಂತ್ರಿಗಳ ನಡುವೆ ವಾಕ್ಸಮರ ನಡೆಯುತ್ತಿದೆ.

ಪಂಜಾಬ್‌ನ ಕಾಂಗ್ರೆಸ್ ಸರ್ಕಾರವು ಹರಿಯಾಣದಲ್ಲಿ ರೈತರ ಅಶಾಂತಿಗೆ ತುಪ್ಪ ಸುರಿಯುತ್ತಿದೆ ಎಂದು ಖಟ್ಟರ್‌ ಸೋಮವಾರ ಆರೋಪಿಸಿದ್ದರು.

ಖಟ್ಟರ್ ಸೇರಿದಂತೆ ಬಿಜೆಪಿಯು ಪ್ರತಿಭಟನಾ ನಿರತ ರೈತರ ಮೇಲೆ ‘ಭಯಾನಕ ದಾಳಿ’ ನಡೆಸುತ್ತಿದೆ. ‘ನಾಚಿಕೆಗೇಡಿನ ಸುಳ್ಳುಗಳಡಿ ಬಿಜೆಪಿ ಆಶ್ರಯ ಪಡೆದಿದೆ’ ಎಂದು ಅಮರಿಂದರ್‌ ಸಿಂಗ್ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.