ADVERTISEMENT

ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಸಮುದಾಯ ಪ್ರಾರ್ಥನೆ ಮಾಡುವಂತಿಲ್ಲ: ಹರಿಯಾಣ ಸಿಎಂ

ಪಿಟಿಐ
Published 22 ಡಿಸೆಂಬರ್ 2021, 7:17 IST
Last Updated 22 ಡಿಸೆಂಬರ್ 2021, 7:17 IST
ಹರಿಯಾಣದ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌.
ಹರಿಯಾಣದ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌.   

ಚಂಡೀಗಢ: ಅನುಮತಿ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಮುದಾಯದವರುಧಾರ್ಮಿಕ ಪ್ರಾರ್ಥನೆಗಳನ್ನು ಮಾಡುವಂತಿಲ್ಲ ಎಂದು ಹರಿಯಾಣದ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ಮಂಗಳವಾರ ರಾಜ್ಯ ಅಸೆಂಬ್ಲಿಯಲ್ಲಿಹೇಳಿದ್ದಾರೆ.

ಗುರುಗ್ರಾಮದ ಸಾರ್ವಜನಿಕ ಸ್ಥಳವೊಂದರಲ್ಲಿಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲುಕೆಲವು ಹಿಂದೂ ಗುಂಪು ಚಕಾರವೆತ್ತಿದ ಪ್ರಕರಣಕ್ಕೆ ಸಂಬಂಧಿಸಿ ಸಿಎಂ ಖಟ್ಟರ್‌ ಈ ಹೇಳಿಕೆ ನೀಡಿದ್ದಾರೆ.

ಯಾವುದೇ ಧಾರ್ಮಿಕ ನಂಬಿಕೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಧಾರ್ಮಿಕ ಪ್ರಾರ್ಥನೆಗಳನ್ನು ಸಲ್ಲಿಸಲು ದೇವಸ್ಥಾನ, ಮಸೀದಿ, ಗುರುದ್ವಾರ ಮತ್ತು ಚರ್ಚ್‌ಗಳಂತಹ ಅಧಿಕೃತ ಧಾರ್ಮಿಕ ಸ್ಥಳಗಳಿವೆ. ಸಾರ್ವಜನಿಕ ಸ್ಥಳಗಳಲ್ಲಿ ದಸರಾ, ರಾಮ್‌ ಲೀಲಾ, ಉರೂಸ್‌ಗಳಂತಹ ಎಲ್ಲ ದೊಡ್ಡ ಹಬ್ಬಗಳನ್ನು ಆಚರಿಸಲು ಅನುಮತಿ ನೀಡಲಾಗಿದೆ ಎಂದು ಖಟ್ಟರ್‌ ಹೇಳಿದ್ದಾರೆ.

ADVERTISEMENT

ಅಸೆಂಬ್ಲಿಯ ವಿರಾಮದ ಸಮಯದಲ್ಲಿ ಕಾಂಗ್ರೆಸ್‌ ಶಾಸಕ ಅಫ್ತಬ್‌ ಅಹ್ಮದ್‌ ಅವರು ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ಹಿಂದೂ ಗುಂಪುಗಳು ತಡೆಯೊಡ್ಡಿದ ವಿಚಾರವನ್ನು ಪ್ರಸ್ತಾಪಿಸಿದಾಗ ಮನೋಹರ ಲಾಲ್‌ ಖಟ್ಟರ್‌ ಪ್ರತಿಕ್ರಿಯಿಸುತ್ತ, 'ತಮ್ಮ ಬಲವನ್ನು ತೋರ್ಪಡಿಸುವ ಮೂಲಕ ಮತ್ತೊಂದು ಸಮುದಾಯದ ಭಾವನೆಗಳನ್ನು ಪ್ರಚೋದಿಸುವುದು ಸರಿಯಲ್ಲ' ಎಂದರು.

ಶುಕ್ರವಾರ ಆರಂಭಗೊಂಡಿರುವ ಹರಿಯಾಣದ ಚಳಿಗಾಲದ ಅಧಿವೇಶನದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಧಾರ್ಮಿಕ ಪ್ರಾರ್ಥನೆಗೆ ಅಡ್ಡಿ ಪಡಿಸಿದ ವಿಚಾರವಾಗಿ ಎರಡನೇ ಬಾರಿಗೆ ಚರ್ಚೆಯಾಗಿದೆ.

'ಶುಕ್ರವಾರದ ಪ್ರಾರ್ಥನೆಗೆ ಕೆಲವು ಶಕ್ತಿಗಳು ನಿರಂತರವಾಗಿ ಅಡಚಣೆ ಮಾಡುತ್ತಿವೆ. ಧರ್ಮದ ಆಚರಣೆಯ ಹಕ್ಕನ್ನು ಸಂವಿಧಾನ ನೀಡಿದೆ. ಪ್ರಾರ್ಥನೆಗೆ ತೊಂದರೆ ಕೊಡುವ ಹಕ್ಕು ಯಾರಿಗೂ ಇಲ್ಲ. ನಗರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗುರುಗ್ರಾಮದಲ್ಲಿ ಸಾವಿರಾರು ಕೋಟಿ ಹೂಡಿಕೆ ಮಾಡಲಾಗಿದೆ. ಒಬ್ಬ ವ್ಯಕ್ತಿಯ ಇಷ್ಟದಂತೆ ಧಾರ್ಮಿಕ ಪ್ರಾರ್ಥನೆ ಸಲ್ಲಿಸಲು ಆಗುತ್ತಿಲ್ಲ ಎಂದರೆ ಏನು ಸಂದೇಶವನ್ನು ನೀಡಿದಂತಾಗುತ್ತದೆ?' ಎಂದು ಶಾಸಕ ಅಫ್ತಾದ್‌ ಅಹ್ಮದ್‌ ಅಸೆಂಬ್ಲಿಯಲ್ಲಿ ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.