ADVERTISEMENT

ಹರಿಯಾಣ ಸರ್ಕಾರ ವಜಾಕ್ಕೆ ಕಾಂಗ್ರೆಸ್‌ ಆಗ್ರಹ: ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯ

ಪಿಟಿಐ
Published 8 ಮೇ 2024, 15:30 IST
Last Updated 8 ಮೇ 2024, 15:30 IST
ನಯಾಬ್‌ ಸಿಂಗ್ ಸೈನಿ
ನಯಾಬ್‌ ಸಿಂಗ್ ಸೈನಿ   

ಚಂಡೀಗಢ: ಹರಿಯಾಣದ ಬಿಜೆಪಿ ಸರ್ಕಾರಕ್ಕೆ ಮೂವರು ಪಕ್ಷೇತರ ಶಾಸಕರು ಬೆಂಬಲ ಹಿಂಪಡೆದಿದ್ದರಿಂದ ನಯಾಬ್ ಸಿಂಗ್ ಸೈನಿ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಅದನ್ನು ಕೂಡಲೇ ವಜಾಗೊಳಿಸಬೇಕು ಎಂದು ಕಾಂಗ್ರೆಸ್‌ ರಾಜ್ಯಪಾಲರನ್ನು ಆಗ್ರಹಿಸಿದೆ.

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಮತ್ತು ಹೊಸದಾಗಿ ಚುನಾವಣೆ ಘೋಷಿಸಲು ಒತ್ತಾಯಿಸಿ ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ಪತ್ರ ಬರೆಯುವುದಾಗಿ ಹರಿಯಾಣದ ಕಾಂಗ್ರೆಸ್‌ ಘಟಕ ತಿಳಿಸಿದೆ. ಅಲ್ಲದೆ, ಇದೇ ರೀತಿ ರಾಜ್ಯಪಾಲರಿಗೆ ಪತ್ರ ಬರೆಯುವಂತೆ ಜನನಾಯಕ ಜನತಾ ಪಕ್ಷ (ಜೆಜೆಪಿ), ಐಎನ್‌ಎಲ್‌ಡಿ ಮತ್ತು ಪಕ್ಷೇತರ ಶಾಸಕರಿಗೂ ಕಾಂಗ್ರೆಸ್‌ ಕೇಳಿಕೊಂಡಿದೆ.

‘ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್‌ ಪಡೆದಿರುವ ಮೂವರು ಪಕ್ಷೇತರರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ ಎಂಬುದನ್ನು ನಾವು ರಾಜ್ಯಪಾಲರಿಗೆ ಪತ್ರ ಮುಖೇನ ತಿಳಿಸಲಿದ್ದೇವೆ’ ಎಂದು ಹರಿಯಾಣ ಕಾಂಗ್ರೆಸ್‌ ಮುಖ್ಯಸ್ಥ ಉದಯ್‌ ಭಾನ್‌ ತಿಳಿಸಿದ್ದಾರೆ.

ADVERTISEMENT

ಈ ಹಿಂದೆ ರಾಜ್ಯದಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿದ್ದ ಜೆಜೆಪಿ ಸಹ ರಾಜ್ಯಪಾಲರಿಗೆ ಪತ್ರ ಬರೆದು, ತಾವು ಸರ್ಕಾರವನ್ನು ಬೆಂಬಲಿಸುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಬಿ.ಬಾತ್ರಾ ಹೇಳಿದ್ದಾರೆ.

ಜೆಜೆಪಿ ನಾಯಕ ದಿಗ್ವಿಜಯ್‌ ಸಿಂಗ್‌ ಚೌತಾಲಾ ಅವರು, ಸೈನಿ ಸರ್ಕಾರವು ಜನರ ವಿಶ್ವಾಸವನ್ನು ಕಳೆದುಕೊಂಡಿದ್ದು, ಅದನ್ನು ಪತನಗೊಳಿಸಲು ವಿರೋಧ ಪಕ್ಷದ ನಾಯಕ ಭೂಪಿಂದರ್‌ ಸಿಂಗ್‌ ಹೂಡಾ ಅವರು ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಮಂಗಳವಾರ ಹೇಳಿದ್ದರು.

ಸರ್ಕಾರಕ್ಕೆ ತೊಂದರೆ ಇಲ್ಲ:

‘ಹರಿಯಾಣದ ಬಿಜೆಪಿ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ, ಅದು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ಮುಖ್ಯಮಂತ್ರಿ ನಯಾಬ್‌ ಸಿಂಗ್ ಸೈನಿ ಬುಧವಾರ ಹೇಳಿದ್ದಾರೆ.

ಮೂವರು ಪಕ್ಷೇತರ ಶಾಸಕರು ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದ ಒಂದು ದಿನದ ಬಳಿಕ ಅವರ ಪ್ರತಿಕ್ರಿಯಿಸಿದ್ದಾರೆ.

‘ರಾಜ್ಯ ಸರ್ಕಾರವು ಸಂಕಷ್ಟದಲ್ಲಿದೆ ಎಂದು ಗೊಂದಲ ಸೃಷ್ಟಿಸಲು ಕಾಂಗ್ರೆಸ್‌ ಯತ್ನಿಸುತ್ತಿದೆ’ ಎಂದು ಆರೋಪಿಸಿದ ಅವರು, ತಮ್ಮ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಸ್ತುತ 88 ಸದಸ್ಯರ ಬಲ ಹೊಂದಿರುವ ವಿಧಾನಸಭೆಯಲ್ಲಿ ಇಬ್ಬರು ಪಕ್ಷೇತರ ಶಾಸಕರ ಬೆಂಬಲವನ್ನು ಸರ್ಕಾರ ಹೊಂದಿದೆ. ಆದರೆ ಬಹುಮತಕ್ಕೆ ಇಬ್ಬರು ಶಾಸಕರ ಕೊರತೆಯಿದೆ.

ಪಕ್ಷಗಳ ಬಲಾಬಲ

ಒಟ್ಟು ಸ್ಥಾನಗಳು – 90

ಬಿಜೆಪಿ – 40

ಕಾಂಗ್ರೆಸ್‌– 30

ಜೆಜೆಪಿ–10

ಪಕ್ಷೇತರರು– 6

ಐಎನ್‌ಎಲ್‌ಡಿ–1

ಎಚ್‌ಎಲ್‌ಪಿ–1

ಖಾಲಿ –2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.