ಚಂಡೀಗಢ: ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ರಾಜ್ಯ ವಿಧಾನಸಭೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಗುರುವಾರ ವಿಸರ್ಜಿಸಿದರು.
ವಿಧಾನಸಭೆಯ ಕೊನೆಯ ಕಲಾಪವು ಮಾರ್ಚ್ 13ಕ್ಕೆ ನಡೆದಿದೆ. ಇದಾದ 6 ತಿಂಗಳ ಒಳಗಾಗಿ ಅಂದರೆ ಸೆಪ್ಟೆಂಬರ್ 12ರ ಒಳಗಾಗಿ ಮತ್ತೊಂದು ಕಲಾಪ ನಡೆಯಬೇಕಿತ್ತು. ಆದರೆ ಚುನಾವಣೆ ಘೋಷಣೆಯಾಗಿರುವುದರಿಂದ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವುದನ್ನು ತಪ್ಪಿಸಲು ವಿಧಾನಸಭೆಯನ್ನು ವಿಸರ್ಜಿಸುವಂತೆ ರಾಜ್ಯ ಸಚಿವ ಸಂಪುಟ ಶಿಫಾರಸು ಮಾಡಿತ್ತು. ಇದರನ್ವಯ ರಾಜ್ಯಪಾಲರು ಈ ಕ್ರಮ ಕೈಗೊಂಡಿದ್ದಾರೆ.
ಹರಿಯಾಣ ವಿಧಾನಸಭೆ ಸಿಬ್ಬಂದಿ ಸಚಿವಾಲಯದ ಅಧಿಸೂಚನೆ ಪ್ರಕಾರ, ಸಂವಿಧಾನದ 174 (2)ನೇ ವಿಧಿಯ ಪ್ರಕಾರ ರಾಜ್ಯಪಾಲರು ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ.
ಹಾಲಿ ವಿಧಾನಸಭೆಯ ಅವಧಿಯು ನವೆಂಬರ್ 3ಕ್ಕೆ ಮುಕ್ತಾಯವಾಗುತ್ತಿತ್ತು. ವಿಧಾನಸಭೆ ವಿಸರ್ಜನೆ ಬಳಿಕ ಹೊಸ ಸರ್ಕಾರ ಸ್ಥಾಪನೆಯಾಗುವವರೆಗೂ ನಯಾಬ್ ಸಿಂಗ್ ಸೈನಿ ನೇತೃತ್ವದ ಸರ್ಕಾರವು ಹಂಗಾಮಿ ಸರ್ಕಾರವಾಗಿ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.