ADVERTISEMENT

Russia–Ukraine War: ಉಕ್ರೇನ್‌ ವಿರುದ್ಧ ಹೋರಾಡುತ್ತಿದ್ದ ಹರಿಯಾಣದ ಯುವಕ ಸಾವು

ರಷ್ಯಾ ಪರ ಹೋರಾಟದಲ್ಲಿ ಭಾಗಿ; ಸಾರಿಗೆ ಕೆಲಸಕ್ಕೆ ಕರೆಸಿ, ಯುದ್ಧಕ್ಕೆ ಬಳಕೆ

ಪಿಟಿಐ
Published 29 ಜುಲೈ 2024, 13:46 IST
Last Updated 29 ಜುಲೈ 2024, 13:46 IST
ರವಿ ಮೌಣ
ರವಿ ಮೌಣ   

ಚಂಡೀಗಢ: ರಷ್ಯಾ ಸೇನೆಯ ಪರವಾಗಿ ಉಕ್ರೇನ್‌ ವಿರುದ್ಧ ಯುದ್ಧದಲ್ಲಿ ಮುಂಚೂಣಿ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಹರಿಯಾಣದ 22 ವರ್ಷದ ಯುವಕ ಮೃತಪಟ್ಟಿದ್ದಾನೆ ಎಂದು ಸೋಮವಾರ ಅವರ ಕುಟುಂಬಸ್ಥರು ತಿಳಿಸಿದ್ದಾರೆ.

‘ಹರಿಯಾಣದ ಕೈತಾಲ್‌ ಜಿಲ್ಲೆಯ ಮಟೌರ್‌ ಗ್ರಾಮದ ನಿವಾಸಿ ರವಿ ಮೌಣ ಮೃತಪಟ್ಟಿರುವುದನ್ನು ಮಾಸ್ಕೊದಲ್ಲಿರುವ ಭಾರತದ ರಾಯಭಾರ ಕಚೇರಿ ಖಚಿತಪಡಿಸಿದೆ’ ಎಂದು ಅವರ ಸಹೋದರ ಅಜಯ್ ಮೌಣ ತಿಳಿಸಿದರು. 

ಸಾರಿಗೆ ಉದ್ಯೋಗಕ್ಕೆ ನೇಮಕ ಮಾಡಲಾಗಿದೆ ಎಂದು ರವಿ ಮೌಣಗೆ ಏಜೆಂಟ್‌ ತಿಳಿಸಿದ್ದರಿಂದ ಈ ವರ್ಷ ಜನವರಿ 13ರಂದು ರಷ್ಯಾಕ್ಕೆ ತೆರಳಿದ್ದರು. ಇದಾದ ಬಳಿಕ, ಹೆದರಿಸಿ ಸೇನೆಗೆ ಸೇರಿಸಲಾಗಿತ್ತು. ಆತನ ಸ್ಥಿತಿಗತಿ ಕುರಿತು ಮಾಹಿತಿ ನೀಡುವಂತೆ ಕೋರಿ ಅವರ ಸಹೋದರರು ರಾಯಭಾರ ಕಚೇರಿಗೆ ಪತ್ರ ಬರೆದಿದ್ದರು. 

ADVERTISEMENT

‘ಆತ ಮೃತಪಟ್ಟಿದ್ದಾನೆ ಎಂದು ರಾಯಭಾರ ಕಚೇರಿ ತಿಳಿಸಿದೆ’ ಎಂದು ಸಹೋದರ ಅಜಯ್ ಮೌಣ ತಿಳಿಸಿದರು. 

ಮೃತದೇಹವನ್ನು ಗುರುತಿಸಲು ಡಿಎನ್‌ಎ ಪರೀಕ್ಷೆಯ ವರದಿ ಕಳುಹಿಸುವಂತೆ ರಾಯಭಾರ ಕಚೇರಿ ತಿಳಿಸಿದೆ ಎಂದು ಕುಟುಂಬಸ್ಥರು ತಿಳಿಸಿದರು. 

ಸೇನೆಯಲ್ಲಿ ಸೇರ್ಪಡೆಗೊಂಡಿರುವ ಭಾರತದ ಪ್ರಜೆಗಳನ್ನು ಹಿಂದಕ್ಕೆ ಕಳುಹಿಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಒಪ್ಪಿಗೆ ಸೂಚಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. 

‘ಉಕ್ರೇನ್‌ ವಿರುದ್ಧ ಮುಂಚೂಣಿಯಲ್ಲಿ ಹೋರಾಟದಲ್ಲಿ ಭಾಗವಹಿಸುವಂತೆ ರಷ್ಯಾ ಸೇನೆಯು ರವಿ ಮೌಣ ಅವರಿಗೆ ಸೂಚಿಸಿತ್ತು. ಇಲ್ಲವಾದರೆ, 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಸಿತ್ತು. ಇದರಿಂದ ಹೆದರಿ, ರಷ್ಯಾದ ಪರವಾಗಿ ಹೋರಾಟ ಮಾಡಲು ಒಪ್ಪಿದ್ದ. ಆರಂಭದಲ್ಲಿ ಕಂದಕಗಳನ್ನು ತೆರೆಯುವ ತರಬೇತಿ ನೀಡಿ, ಯುದ್ಧ ಭೂಮಿಗೆ ಕಳುಹಿಸಿಕೊಡಲಾಗಿತ್ತು’ ಎಂದು ಅಜಯ್‌ ಮೌಣ ಆರೋಪಿಸಿದ್ದಾರೆ.

‘ಮಾರ್ಚ್‌ 12ರವರೆಗೆ ನಮ್ಮ ಸಂಪರ್ಕದಲ್ಲಿದ್ದ ಆತ, ತೀವ್ರ ಅಸಮಾಧಾನಗೊಂಡಿದ್ದ’ ಎಂದರು.

ಭೂಮಿ ಮಾರಿ ರಷ್ಯಾಕ್ಕೆ:

ರವಿ ಮೌಣನನ್ನು ರಷ್ಯಾಕ್ಕೆ ಕಳುಹಿಸಲು ಒಂದು ಎಕರೆ ಜಮೀನು ಮಾರಿ, ₹11.50 ಲಕ್ಷ ಹಣ ಹೊಂದಿಸಿ ಅಲ್ಲಿಗೆ ಕಳುಹಿಸಿಕೊಡಲಾಗಿತ್ತು. ಈಗ ಆತನ ಮೃತದೇಹ ದೇಶಕ್ಕೆ ಕರೆತರಲು ನಮ್ಮ ಬಳಿ ಹಣವಿಲ್ಲ. ಸಹೋದರನ ಮೃತದೇಹ ತರಲು ನೆರವಾಗಬೇಕು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುಟುಂಬದ ಸದಸ್ಯರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.